ಮಂಗಳೂರು/ಅಡಿಲೇಡ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರದಿಂದ ಆರಂಭವಾಗಿದೆ. ಇದು ಹಗಲು ರಾತ್ರಿ ಟೆಸ್ಟ್ ಆಗಿರುವುದರಿಂದ ಪಿಂಕ್ ಬಾಲ್ನೊಂದಿಗೆ ಆಡಿಲೇಡ್ ಓವಲ್‌ನಲ್ಲಿ ಈ ಟೆಸ್ಟ್ ಆಡಲಾಗುತ್ತಿದೆ. ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿದೆ.
ಎರಡು ತಂಡಗಳ ಪ್ಲೇಯಿಂಗ್ 11 ಕೂಡ ಹೊರಬಿದ್ದಿದ್ದು, ಭಾರತದ ತಂಡದಲ್ಲಿ ಪ್ರಮುಖ ಮೂರು ಬದಲಾವಣೆ ಮಾಡಲಾಗಿದೆ. ಎಲ್ಲರೂ ನಿರೀಕ್ಷಿಸಿದಂತೆ ಪಿಂಕ್ ಬಾಲ್ ಟೆಸ್ಟ್ ಗೆ ಭಾರತ ತಂಡದಲ್ಲಿ ಬದಲಾವಣೆಗಳಾಗಿವೆ.
ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ತಂಡದಲ್ಲಿ ಸ್ಥಾನ ಪಡೆದಿದ್ದರೆ, ಮೊದಲ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ನೀಡದ ದೇವದತ್ ಪಡಿಕ್ಕಲ್ ಹಾಗೂ ಧೃವ್ ಜುರೇಲ್ ತಂಡದಿಂದ ಹೊರಬಿದ್ದಿದ್ದಾರೆ. ರೋಹಿತ್ ತನ್ನ ಎರಡನೇ ಮಗುವಿನ ಜನನದ ಕಾರಣ ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರೆ, ಗಿಲ್ ಬೆರಳಿನ ಗಾಯದಿಂದಾಗಿ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದರು. ಇದೀಗ ಈ ಇಬ್ಬರು ತಂಡವನ್ನು ಕೂಡಿಕೊಂಡಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಭಾರತ ತಂಡದ ಸ್ಪಿನ್ ವಿಭಾಗದಲ್ಲಿ ಮೂರನೇ ಬದಲಾವಣೆಯಾಗಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಕಳೆದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಅಶ್ವಿನ್ 5 ವಿಕೆಟ್ ಪಡೆದಿದ್ದರು. ಅಡಿಲೇಡ್ ನಲ್ಲಿ ಅಶ್ವಿನ್ 3 ಟೆಸ್ಟ್ ಗಳನ್ನು ಆಡಿದ್ದು, ಅದರಲ್ಲಿ 16 ವಿಕೆಟ್ ಗಳನ್ನು ಪಡೆದಿದ್ದಾರೆ.
ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ (ನಾಯಕ), ರಿಷಬ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.