ತ್ರಿಪುರಾ : ದನ ಕಳ್ಳತನ ಮಾಡಿರುವ ಶಂಕೆಯಿಂದ ಮೂವರು ಯುವಕರನ್ನು ಗ್ರಾಮಸ್ಥರು ಥಳಿಸಿ ಕೊಂದಿರುವ ಘಟನೆ ತ್ರಿಪುರದ ಖೋವಾಯಿ ಜಿಲ್ಲೆಯ ಎಡಿಸಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಜಹೇದ್ ಹೊಸೈನ್ (28), ಬಿಲ್ಲಾಲ್ ಮಿಯಾ (30) ಮತ್ತು ಸೈಫುಲ್ ಇಸ್ಲಾಂ (18) ಎಂದು ಗುರುತಿಸಲಾಗಿದೆ.
ಕೊಲೆಯಾದ ಎಲ್ಲರೂ ಸೆಪಾಹಿಜಾಲ ಜಿಲ್ಲೆಯ ಸೋನಮುರಾದ ನಿವಾಸಿಗಳು ಎಂದು ತಿಳಿದು ಬಂದಿದೆ.
ನಿನ್ನೆ ಭಾನುವಾರ ಬೆಳಗ್ಗೆ ಎಡಿಸಿ ಗ್ರಾಮದ ಸಮೀಪ ಮೂವರು ಅಪರಿಚಿತ ಯುವಕರು ಅನುಮಾನಾಸ್ಪದವಾಗಿ ಟ್ರಕ್ ಓಡಿಸುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅವರನ್ನು ಅಡ್ಡಗಟ್ಟಿದ್ದಾರೆ.
ಟ್ರಕ್ನಲ್ಲಿ ಐದು ಹಸುಗಳಿರುವುದನ್ನು ನೋಡಿದ ಜನರು ಯುವಕರನ್ನು ಮನಬಂದಂತೆ ಥಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ, ಪ್ರಯೋಜನವಾಗಿರಲಿಲ್ಲ.
ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇನ್ನೂ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದು ಬಂದಿದೆ.