ಮೈಸೂರು: ಟಿಪ್ಪುವಿನ 100 ಅಡಿ ಪ್ರತಿಮೆ ನಿರ್ಮಿಸುತ್ತೇನೆ ಎಂದು ಹೇಳಿಕೆ ನೀಡಿದ ಬಳಿಕ ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಇದೀಗ ತನಗೆ ಹಿಂದು ಕಾರ್ಯಕರ್ತರಿಂದ ಜೀವ ಬೆದರಿಕೆ ಇದೆ ಎಂದು ದೂರು ದಾಖಲಿಸಿದ್ದಾರೆ.
ತನ್ವೀರ್ ಸೇಠ್
ಹಿಂದೂ ಕಾರ್ಯಕರ್ತನಿಂದ ತಮಗೆ ಬೆದರಿಕೆ ಇದೆ ಎಂದು ಆರೋಪಿಸಿ ಸೇಠ್ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರದ ರಘು ಎಂಬವರ ವಿರುದ್ಧ ದೂರು ದಾಖಲಿಸಿದ್ದಾರೆ. ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪಿಸುವ ಹೇಳಿಕೆ ಹಿಂಪಡೆದು ಕ್ಷಮೆ ಯಾಚಿಸದಿದ್ದರೆ 6X3 ಅಡಿ ಫಿಕ್ಸ್ ಎಂದು ವೀಡಿಯೊ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬೆದರಿಕೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಬೆದರಿಕೆ ಹಾಕಿರುವ ರಘು ವಿರುದ್ಧ ಕಾನೂನು ಕ್ರಮಕ್ಕೆ ಸೇಠ್ ಒತ್ತಾಯಿಸಿದ್ದಾರೆ.
ಹಾಗೆಯೇ ಮೈಸೂರ್ ಬೀಡಿ ಮಜ್ದೂರ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಸಿ. ಶೌಕತ್ ಪಾಷಾ ಕೂಡ ಉದಯಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ತನ್ವೀರ್ ಸೇಠ್ ಮೈಸೂರಿನ ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. 2019ರಲ್ಲಿ ಶಾಸಕರ ತನ್ವೀರ್ ಸೇಠ್‌ಗೆ ಯುವಕನೊಬ್ಬ ಕತ್ತಿಯಿಂದ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಿದ್ದ ಘಟನೆಯೂ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಬೆದರಿಕೆ ಹಾಕಿರುವ ಆರೋಪಿ ರಘು ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.