ಮಂಗಳೂರು: “ಯಾತ್ರಿಗನ್ ಕೃಪಯಾ ಧ್ಯಾನ್ ದೇ..” ಎಂದು ರೈಲಿನಲ್ಲಿ ಹೋಗುವವರಿಗೆ ಗೊತ್ತೆ ಇರುತ್ತದೆ. ಆದರೆ ಈ ಹೆಣ್ಣಿನ ಧ್ವನಿಯ ಹಿಂದೆ ಇರುವುದು ಅವಳಲ್ಲ, ಬದಲಿಗೆ ಅವನು ಎನ್ನುವುದು ಬಹುಶಃ ಯಾರಿಗೂ ತಿಳಿದಿರಲಿಕ್ಕಿಲ್ಲ.
ರೈಲ್ವೇ ನಿಲ್ದಾಣಕ್ಕೆ ಹೋದಾಗ ಟಿಂಗ್….ಟಿಂಗ್… ಪ್ರಯಾಣಿಕರೇ ಗಮನಿಸಿ… ನಿಮ್ಮ ಗಾಡಿ ಸಂಖ್ಯೆ, ಇಷ್ಟು ಗಂಟೆಗೆ, ಇಷ್ಟನೇ ಪ್ಲಾಟ್ ಫಾರ್ಮ್ ಪ್ರವೇಶಿಸಲಿದೆ ಎಂದು ರೈಲು ನಿಲ್ದಾಣಗಳಲ್ಲಿ ಪ್ರತಿ ನಿಮಿಷಕ್ಕೂ ಧ್ವನಿಯನ್ನು ಕೇಳುತ್ತಲೇ ಇರುತ್ತೇವೆ ಅಲ್ಲವೇ? ಈ ಹೆಣ್ಣಿನ ಧ್ವನಿಯಲ್ಲಿ ಅನೌನ್ಸ್ ಮಾಡುವುದು ಒಬ್ಬ ಹುಡುಗ.
ಆ ಹುಡುಗನ ಹೆಸರು ಶ್ರವಣ್ ಅಡೋಡ್ ಎನ್ನುವ 24 ವರ್ಷದ ಯುವಕ. ಭಾರತೀಯ ರೈಲ್ವೇಯಲ್ಲಿ ಖಾಸಗಿ ವಲಯದ ಉದ್ಯೋಗಿಯಾಗಿ ಕೆಲಸ ಮಾಡುವ ಶ್ರವಣ್ ಅಡೋಡ್ ಅವರು ಹೆಣ್ಣಿನ ಧ್ವನಿಯಲ್ಲಿ ಘೋಷಣೆ ಮಾಡಿರುವ ರೆಕಾರ್ಡಿಂಗ್ ಇದಾಗಿದೆ. ಈ ಕೂತುಹಲದ ವಿಷಯ ಈಗ ಬಯಲಾಗಿದೆ.
ಇದನ್ನೂ ಓದಿ: ಗ್ಯಾಂಗ್ ಸ್ಟರ್ ನ ಮಗುವಿಗೆ ವಾಮಾಚಾರ ಮಾಡಿದ ಆರೋಪ: 110 ಜನರ ಹತ್ಯೆ !
ಶ್ರವಣ್ ಅಡೋಡ್ ಅವರು ಮಹಾರಾಷ್ಟ್ರದ ಪರ್ಲಿಯವರು. ಭಾರತೀಯ ರೈಲ್ವೆಯಲ್ಲಿ ಖಾಸಗಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಒಂದು ದಿನ, ವಿದ್ಯುತ್ ನಿಲುಗಡೆಯ ಸಮಯದಲ್ಲಿ ತಾಂತ್ರಿಕ ದೋಷವು ಸ್ವಯಂಚಾಲಿತ ಪ್ರಕಟಣೆ ವ್ಯವಸ್ಥೆಯನ್ನು ಅಡ್ಡಿಪಡಿಸಿತು. ಆಗ ಘೋಷಣೆ ಮಾಡುವ ಅಗತ್ಯ ಉಂಟಾಯಿತು. ಈ ತುರ್ತು ಅಗತ್ಯಕ್ಕೆ ಕೂಡಲೇ ಸ್ಪಂದಿಸಿದರು ಶ್ರವಣ್. ಹೆಣ್ಣಿನ ಧ್ವನಿ ಇದ್ದರೆ ಚೆನ್ನಾಗಿರುತಿತ್ತು ಎನ್ನುವ ಕಾರಣಕ್ಕೆ ಈ ಬಗ್ಗೆ ಚರ್ಚೆ ನಡೆದಾಗ ಅಲ್ಲಿಯೇ ಇದ್ದ ಶ್ರವಣ್ ಅವರು ಹೆಣ್ಣಿನ ಧ್ವನಿಯ ಮೂಲಕ ಈ ಘೋಷಣೆಯ ರೆಕಾರ್ಡಿಂಗ್ ಮಾಡಿರುವುದು ಈಗ ತಿಳಿದುಬಂದಿದೆ.
ಬಳಿಕ ತಂತ್ರಜ್ಞಾನದ ಸಹಾಯದಿಂದ ಅವರ ಧ್ವನಿ ರೆಕಾರ್ಡಿಂಗ್ ಅನ್ನು ವಿವಿಧ ಭಾಷೆಗಳಲ್ಲಿ ಡಿಜಿಟಲ್ ಪ್ರಕ್ರಿಯೆಗೊಳಿಸಲಾಗಿದೆ. ಈಗ ಇವರ ಧ್ವನಿಯು ರಾಷ್ಟ್ರವ್ಯಾಪಿ ರೈಲು ನಿಲ್ದಾಣಗಳಲ್ಲಿ ಈ ಧ್ವನಿ ಚಿರಪರಿಚಿತವಾಗಿದೆ.
ಶ್ರವಣ್ ಅವರ ಹಿಂದಿನ ಯಶಸ್ಸು, ಹಲವಾರು ಸವಾಲುಗಳಿಂದ ಕೂಡಿತ್ತು. ಕಾಲೇಜು ದಿನಗಳಲ್ಲಿ, ಅವರ ಧ್ವನಿ ಕೌಶಲ್ಯವು ಗೆಳೆಯರಿಗೆ ಹಾಸ್ಯಾಸ್ಪದ ವಿಷಯವಾಗಿತ್ತು. ಗೆಳೆಯರು ಅವರನ್ನು ಅಪಹಾಸ್ಯ ಮಾಡಿ ಅವರನ್ನು ಹೆಣ್ಣಿನ ಹೆಸರುಗಳಿಂದ ಕರೆದಿದ್ದು ಉಂಟು. ಆದರೆ, ಶ್ರವಣ್ ಅವರು ಈ ಎಲ್ಲಾ ಟೀಕೆಗಳನ್ನು ನಿರ್ಲಕ್ಷಿಸಿ ತಮ್ಮ ಕಲೆಯತ್ತ ಗಮನ ಹರಿಸಿದರು. ಇಂದು, ಅವರ ಧ್ವನಿಯು ಭಾರತದಾದ್ಯಂತ ಲಕ್ಷಾಂತರ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುತ್ತದೆ.
ಶ್ರವಣ್ ಅವರು, ಧ್ವನಿ ಕಲಾವಿದ, ಯುಗಳ ಗಾಯಕ ಮತ್ತು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟರಾಗಿದ್ದಾರೆ. ವೈದ್ಯನಾಥ್ ಕಾಲೇಜಿನ ಪದವೀಧರ ಮತ್ತು ಬಿಎಚ್‌ಇಎಲ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಶ್ರವಣ್ ಈಗ ಮಹಾರಾಷ್ಟ್ರದ ಮುಂಬೈನಲ್ಲಿ ನೆಲೆಸಿದ್ದಾರೆ.