ಮೂಡುಬಿದಿರೆ: ರೈತರನ್ನು ಹೊರದಬ್ಬಿ ಯಾವುದೇ ಅಭಿವೃದ್ಧಿ ಬೇಡ, ರೈತರನ್ನು ಉಳಿಸಿಕೊಂಡೇ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಈಗಾಗಲೇ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಭೂಮಿ ಕಳೆದುಕೊಂಡು ಸಂತ್ರಸ್ತರಾದ ಕೃಷಿಕರಿಗೆ ಸೂಕ್ತ ಪರಿಹಾರ ಮತ್ತು ಉದ್ಯೋಗ ಒದಗಿಸಬೇಕು ಎಂದು ಕಾಂಗ್ರೆಸ್ ಯುವ ನಾಯಕ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಒತ್ತಾಯಿಸಿದರು.
ಅವರು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರನ್ನು ನಿರ್ಲಕ್ಷಿಸಿ ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳದೆ ರೈತರ ಜಮೀನಿನಲ್ಲಿ ಯಾವುದೇ ಕೈಗಾರಿಕೆ ಬೇಡ, ರೈತರನ್ನು ಉಳಿಸಿಕೊಂಡೇ ಐಟಿ ಯಂತಹ ಉದ್ಯಮ ಆರಂಭಿಸಲಿ ಎಂದರು.
ನಿನ್ನೆ ಮೂಡೆಬಿದಿರೆಯಲ್ಲಿ ವಿವಿಧ ಬೇಡಿಕೆಗಳನ್ನು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದು, ಅದನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಈ ಬೇಡಿಕೆಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳದಿದ್ದರೆ ಮುಂದೆ ನ. 28 ರಂದು ಕಿಸಾನ್ ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದರು.
ಪ್ರಸಕ್ತ ಬಿಜೆಪಿ ಸರಕಾರದಿಂದ ಅಭಿವೃದ್ಧಿ ಶೂನ್ಯ. ಪ್ರತಿಯೊಂದು ಕೆಲಸದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಕೀಲರ ಭವನ ಕಾಮಗಾರಿಯಲ್ಲಿ ನಡೆದ ಕಳಪೆ ಕಾಮಗಾರಿ ಸುಪ್ರೀಂ ಕೋರ್ಟು ನ್ಯಾಯಾಧೀಶರ ಭೇಟಿ ಸಂದರ್ಭದಲ್ಲಿ ಬಟಾ ಬಯಲಾಗಿದೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕೆ. ಅಭಯ ಚಂದ್ರ ಜೈನ್, ಮುಖಂಡ ರಾಜೇಶ್ ಕಡಲುಕೆರೆ ಮತ್ತಿತರರು ಉಪಸ್ಥಿತರಿದ್ದರು.