ಬಜಪೆ: ಎಲೆಕ್ಟ್ರಾನಿಕ್ ಅಂಗಡಿ, ಬೇಕರಿ, ತರಕಾರಿ ಅಂಗಡಿ ಹಾಗೂ ಬಂಡ ಶಾಲೆಯ ಒಂದು ಗೂಡಂಗಡಿಗೆ ಶುಕ್ರವಾರದ ರಾತ್ರಿ ವೇಳೆಯಲ್ಲಿ ಕಳ್ಳರು ನುಗ್ಗಿ, ಮೊಬೈಲ್, ಎಲೆಕ್ಟ್ರಾನಿಕ್ ಸಾಮಾಗ್ರಿ, ಚಿನ್ನದ ಉಂಗುರ, ನಗದು, ಬೇಕರಿಯಿಂದ ತಿಂಡಿ, ನಗದು, ತರಕಾರಿ ಅಂಗಡಿಯಿಂದ ನಗದು ನಾಣ್ಯ, ಸಿಗರೇಟ್, ಗೂಡಂಗಡಿಯಿಂದ ಬಿಸ್ಕತ್‌ನ್ನು ಕಳವು ಮಾಡಿರುವ ಘಟನೆ ಗುರುಪುರ ಪೇಟೆಯಲ್ಲಿ ನಡೆದಿದೆ.
ಗುರುಪುರ ಪೇಟೆಯ ಉಮೇಶ್ ಭಟ್ ರ ಎಲೆಕ್ಟ್ರಾನಿಕ್ ಅಂಗಡಿಗೆ ನುಗ್ಗಿ 12 ಮೊಬೈಲ್ ಫೋನ್, 20 ಸಾವಿರ ರೂಪಾಯಿ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳು, 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಉಂಗುರ, ಸುಮಾರು 25 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ. ಉಮೇಶ್ ನ ಸಹೋದರ ರಮೇಶ್ ಭಟ್ ರ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಬೇಕರಿ ತಿಂಡಿಗಳನ್ನು ಹಾಗೂ ನಗದುಗಳನ್ನು ಶಟರ್ ಬೀಗ ಒಡೆದು ಕಳವು ಮಾಡಿದ್ದಾರೆ. ಸಂಶುದ್ದೀನ್ ನ ತರಕಾರಿ ಅಂಗಡಿಯ ಮರದ ಬಾಗಿಲಿನ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ಡಬ್ಬಿಯಲ್ಲಿದ್ದ ಹತ್ತು ರೂಪಾಯಿಯ ನ್ಯಾಣ ಸುಮಾರು 10 ಸಾವಿರ ರೂಪಾಯಿ ನಗದು, ಸುಮಾರು 10ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಸಹಿತ 20 ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವು ಮಾಡಿದ ಕಳ್ಳರು ಅಂಗಡಿಯಲ್ಲಿನ ಫ್ರೀಜ್‌ನಲ್ಲಿದ್ದ ಮೊಸರನ್ನು ಕುಡಿದಿದ್ದಾರೆ ಹಾಗೂ ಚೆಲ್ಲಿದ್ದಾರೆ. ಅಂಗಡಿಯಲ್ಲಿದ್ದ ಅನಾನಸನ್ನು ತುಂಡು ಮಾಡಿ,ತಿಂದಿದ್ದಾರೆ. ಇಲ್ಲಿ ಕಳ್ಳರು ಹಲವು ಹೊತ್ತು ಕಾಲ ಕಳೆದಿರುವುದು ಕಂಡು ಬಂದಿದೆ.ಬಂಡಸಾಲೆಯಲ್ಲಿ ಧರ್ಮಣ ಪೂಜಾರಿ ಗೂಡಂಗಡಿಯ ಶಟರ್‌ನ ಬೀಗ ಮುರಿದು ಬಿಸ್ಕತ್‌ನ್ನು ಕಳವು ಮಾಡಿದ್ದಾರೆ.
ಸುಮಾರು ರಾತ್ರಿ 2 ರಿಂದ 3 ಗಂಟೆಯೊಳಗೆ ಈ ಕಳವು ನಡೆದಿದೆ. ಇದು ಒಂದು ಕಳ್ಳರ ತಂಡವಾಗಿದ್ದು, ಗುರುಪುರ ಪೇಟೆಯಲ್ಲಿ ಸಿಸಿ ಕ್ಯಾಮಾರದಲ್ಲಿ ಕಳ್ಳರ ಸುಳಿವು ಸಿಗುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ಪಡೆದು ಹೇಳಿಕೆ ತೆಗೆದುಕೊಂಡು ಹೋಗಿದ್ದಾರೆ.
ಮಂಗಳೂರು : ಡೊಂಗರಕೇರಿ ವೆಂಕಟರಮಣ ದೇವಸ್ಥಾನದಲ್ಲಿ ಜನವರಿ 10 ರಂದು ಏಳನೇ ವರ್ಷದ ಏಕಾದಶಿಯನ್ನು ಅದ್ಧೂರಿಯಿಂದ ಆಚರಿಸಲಾಗುವುದು ಎಂದು ದೇವಳದ ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ನಾಗ್ವೇಕರ್ ಬೋಳಾರ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ಇಲ್ಲಿ ನಡೆಯುವ ಏಕಾದಶಿ ಕಾರ್ಯಕ್ರಮ ದೇವರ ಅಪ್ಪಣೆಯಂತೆ ನಡೆಯುತ್ತಿದ್ದು, ಪ್ರತೀ ಬಾರಿಯಂತೆ ಈ ಬಾರಿಯೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ಲೋಕ ಕಲ್ಯಾಣಕ್ಕಾಗಿ ನಾಮತ್ರಯ ಮಹಾಮಂತ್ರ ಜಪಯಜ್ಞ, ಪುಷ್ಪಯಾಗ ಮತ್ತು ಅಷ್ಟಾವಧಾನ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಾಯಂಕಾಲ 4 ಗಂಟೆಗೆ ಡೊಂಗರಕೇರಿ ಕಟ್ಟೆಯಿಂದ ಪುಷ್ಪಯಾಗದ ಹೂವಿನ ವಿಶೇಷ ಮೆರವಣಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ಉಸ್ತುವಾರಿ ಗಣೇಶ್ ನಾಗ್ವೇಕರ್ ಬೋಳಾರ್ ಮಾತನಾಡಿ, ಅಂದು ಬೆಳಗ್ಗೆ 7 ರಿಂದ 8ರ ವರೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ರಿಂದ 3ರ ವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ದೀಪಾರಾಧನೆ ಮಹಾಪೂಜೆ ಬಳಿಕ 10 ಗಂಟೆಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಹೇಳಿದರು.
ಮಂಗಳೂರು: ನಗರದಲ್ಲಿ ಕರ್ನಾಟಕದ ಮೊದಲ ಸಿ ಬ್ಯಾಂಡ್ ಹವಾಮಾನ ರಾಡಾರ್(DWR) ಅಳವಡಿಕೆ ಕಾರ್ಯ ಕೆಲವೇ ದಿನಗಳಲ್ಲಿ ಸಂಪೂರ್ಣಗೊಳ್ಳಲಿದೆ. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ವಿಳಂಬವಾದರೂ ಜನವರಿ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಬೆಂಗಳೂರು ಕೇಂದ್ರದ ಮುಖ್ಯಸ್ಥ ಎನ್ ಪುವಿಯರಸನ್ ತಿಳಿಸಿದ್ದಾರೆ.
ಇಲಾಖೆಯ 150ನೇ ವಾರ್ಷಿಕೋತ್ಸವದ ಅಂಗವಾಗಿ TMD ಬೆಂಗಳೂರು ಶನಿವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಪುವಿಯರಸನ್ ಅವರು, ಆರಂಭದಲ್ಲಿ ಜನವರಿ 15 ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದ್ದ ರಾಡಾರ್ ಈಗ ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯನಿರ್ವಹಿಸಲು ಪ್ರಾರಂಭಿಸುವ ಭರವಸೆ ಇದೆ ಎಂದು ಹೇಳಿದರು.
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಲ್ಲಿ (KSNDMC) ಆಯೋಜಿಸಲಾದ ಕಾರ್ಯಾಗಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಮತ್ತು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಕೃಷಿ ಹವಾಮಾನ ವಿಭಾಗದ ಕೊಡುಗೆಗಳೊಂದಿಗೆ ಹಲವಾರು ಟೆಕ್ನಿಕಲ್ ಸೆಷನ್ಸ್ ಗಳನ್ನು ಒಳಗೊಂಡಿತ್ತು.
ಕಾರ್ಯಾಗಾರದಲ್ಲಿ ಬೆಂಗಳೂರಿನಲ್ಲಿ S-ಬ್ಯಾಂಡ್ DWR ಅನ್ನು ಸ್ಥಾಪಿಸುವಲ್ಲಿ ಐಎಂಡಿ ಎದುರಿಸುತ್ತಿರುವ ಸವಾಲುಗಳ ಬಗ್ಗೆಯೂ ಪುವಿಯರಸನ್ ಚರ್ಚಿಸಿದರು. ಯೋಜನೆಯು ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದೆ. ಏಕೆಂದರೆ ಐಎಂಡಿಗೆ ಟವರ್ ಮತ್ತು ಯುಟಿಲಿಟಿ ಕೋಣೆಗೆ 30×30 ಮೀಟರ್ ಪ್ಲಾಟ್ ಅಗತ್ಯವಿದೆ ಎಂದು ವಿವರಿಸಿದರು.
ಕದ್ರಿ ಬಳಿ ಸ್ಥಾಪಿಸಲಾಗುತ್ತಿರುವ ಮಂಗಳೂರು ರಾಡಾರ್ 250-300 ಕಿಮೀ ವ್ಯಾಪ್ತಿಯನ್ನು ಒಳಗೊಂಡಿದೆ. ಆಗುಂಬೆ, ಹುಲಿಕಲ್, ತಲಕಾವೇರಿ, ಕೆರೆಕಟ್ಟೆ ಮತ್ತು ಭಾಗಮಂಡಲ ಸೇರಿದಂತೆ ಮಾನ್ಸೂನ್‌ನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವ ಕರ್ನಾಟಕದ ಪ್ರದೇಶಗಳಿಗೆ ವರ್ಧಿತ ಹವಾಮಾನ ಮುನ್ಸೂಚನೆಯನ್ನು ಒದಗಿಸುತ್ತದೆ. ಪುವಿಯರಸನ್ ಅವರು ಧಾರವಾಡದಲ್ಲಿ X-ಬ್ಯಾಂಡ್ DWR ಯೋಜನೆಗಳನ್ನು ಮತ್ತು ಹೊನ್ನಾವರದಲ್ಲಿ S-ಬ್ಯಾಂಡ್ ರಾಡಾರ್‌ಗಳು ಮತ್ತು ಬಳ್ಳಾರಿಯಲ್ಲಿ C-ಬ್ಯಾಂಡ್ ರಾಡಾರ್‌ಗಳ ಪ್ರಸ್ತಾಪವನ್ನು ಪ್ರಸ್ತಾಪಿಸಿದರು.
ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಯಾವುದೇ ಡಾಪ್ಲರ್ ರಾಡಾರ್ ಇರುವುದಿಲ್ಲ. ಈ ಹಿನ್ನೆಲೆ ಕರ್ನಾಟಕವು ನಿಖರ ಹವಾಮಾನ ಮುನ್ಸೂಚನೆಗಾಗಿ ಗೋವಾ, ಹೈದರಾಬಾದ್, ಚೆನ್ನೈಯ ರಾಡಾರ್‌ಗಳನ್ನು ಅವಲಂಬಿಸಿದೆ.
ಕಾರ್ಯಾಗಾರದಲ್ಲಿ KSNDMC ನಿರ್ದೇಶಕ ಭೋಯಾರ್ ಹರ್ಷಲ್ ನಾರಾಯಣರಾವ್ ಅವರು ಕರ್ನಾಟಕದ ನೈಸರ್ಗಿಕ ವಿಕೋಪಗಳ ದುರ್ಬಲತೆಯನ್ನು ಚರ್ಚಿಸಿದರು. ರಾಜ್ಯದಲ್ಲಿ ಶೇ.80ರಷ್ಟು ಬರಪೀಡಿತವಾಗಿದ್ದು, ಕಳೆದ 23 ವರ್ಷಗಳಲ್ಲಿ 16 ವರ್ಷ ಬರಗಾಲಕ್ಕೆ ತುತ್ತಾಗಿದೆ. ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಮತ್ತು ಕೊಡಗಿನಂತಹ ಜಿಲ್ಲೆಗಳಲ್ಲಿ ಭೂಕುಸಿತದಿಂದ ವ್ಯಾಪಕ ಹಾನಿ ಉಂಟಾಗಿದೆ. 2018 ರಿಂದ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಭೂಕುಸಿತಗಳು ಸಂಭವಿಸಿವೆ ಎಂದರು.
ಮಂಗಳೂರು : ಆಟದ ಪಿಸ್ತೂಲ್ ಎಂದು ಭಾವಿಸಿ ಟೇಬಲ್ ಮೇಲಿದ್ದ ರಿಯಲ್ ರಿವಾಲ್ವರ್ ಎತ್ತಿಕೊಂಡು ಹೊಟ್ಟೆಗೆ ಇಟ್ಟು ಟ್ರಿಗರ್ ಅದುಮಿದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾನೆ. ಮಂಗಳೂರಿನ ಹೊರವಲಯ ವಾಮಂಜೂರು ಬಳಿ ಈ ಘಟನೆ ನಡೆದಿದೆ. ಗಾಯಾಳು ಹೆಸರು ಸಫ್ವಾನ್ ಎಂಬ ಮಾಹಿತಿ ಲಭ್ಯವಾಗಿದೆ.
ವಾಮಂಜೂರಿನ ಸೆಕೆಂಡ್ ಹ್ಯಾಂಡ್ ಬಜಾರ್‌ನಲ್ಲಿ ಜನವರಿ 6 ರಂದು ಈ ಘಟನೆ ನಡೆದಿದ್ದು, ಸೆಕೆಂಡ್ ಹ್ಯಾಂಡ್ ಐಟಂ ಖರೀದಿ ಮಾಡಲು ಈತ ಅಂಗಡಿಯೊಂದಕ್ಕೆ ಬಂದಿದ್ದ. ಭಾಸ್ಕರ್ ಎಂಬವರು ಅಂಗಡಿಯ ಟೇಬಲ್ ಮೇಲೆ ರಿವಾಲ್ವರ್ ಇರಿಸಿ ಒಳಗೆ ಹೋದ ಸಂದರ್ಭದಲ್ಲಿ ಸಫ್ವಾನ್ ರಿವಾಲ್ವಾರ್ ಕೈಗೆತ್ತಿಕೊಂಡಿದ್ದಾನೆ.
ಆಟದ ಪಿಸ್ತೂಲ್ ಇರಬೇಕು ಎಂದು ಅದನ್ನು ಕೈನಲ್ಲಿ ಹಿಡಿದು ತಮಾಷೆಗೆ ಹೊಟ್ಟೆಗೆ ಇಟ್ಟು ಟ್ರಿಗರ್ ಅದುಮಿದ್ದಾನೆ. ರಿವಾಲ್ವರ್ ನಿಂದ ಸಿಡಿದ ಗುಂ*ಡು ಆತನ ಹೊಟ್ಟೆಗೆ ನುಸುಳಿದ್ದು, ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Pingback: ಬೆಳ್ಳಂಬೆಳಗ್ಗೆ ನಡೆದ ಸಿಲಿಂಡರ್ ಸ್ಪೋ*ಟ; ಕೇರಳ ಮೂಲದ ಯುವಕರು ಗಂ*ಭೀರ - NAMMAKUDLA NEWS - ನಮ್ಮಕುಡ್ಲ ನ್ಯೂಸ್