50ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳ ವಂಚಕ ಪೊಲೀಸರ ಬಲೆಗೆ
ಚಿಕ್ಕಮಗಳೂರು: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 50ಕ್ಕೂ ಅಧಿಕ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಮೋಸ ಮಾಡಿ ಸುಮಾರು ಎರಡು ಕೋಟಿಗೂ ಅಧಿಕ ಹಣ ವಂಚಿಸಿದ್ದ ಕಳ್ಳನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿರುವ ಘಟನೆ ನಡೆದಿದೆ.
ಈ ನಕಲಿ ಅಧಿಕಾರಿಯ ಹೆಸರು ಪ್ರಭಾಕರ್, ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ. ಬಿಬಿಎಂ ಓದಿರುವ ಈತ ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಕೊಂಡಿದ್ದ.
ದುಡ್ಡಿನಾಸೆಗೆ ಯುವಕ-ಯುವತಿಯರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಅವರಿಂದ ಹಣ ಪೀಕುತ್ತಿದ್ದ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳ ಯುವಕ-ಯುವತಿಯರಿಗೆ ಈತ ಯಮಾರಿಸಿದ್ದಾನೆ.
ಕೆಲಸ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರ ಹತ್ತಿರವೂ ಕನಿಷ್ಠ 7 ಲಕ್ಷದಿಂದ 15 ಲಕ್ಷದವರೆಗೂ ವಸೂಲಿ ಮಾಡಿದ್ದಾನೆ.
ಅಂದ್ಹಾಗೆ ಈತ ಕಳೆದ ಒಂದೂವರೆ ವರ್ಷದಲ್ಲಿ ಬರೋಬ್ಬರಿ 2 ಕೋಟಿಗೂ ಅಧಿಕ ಹಣವನ್ನು ವಂಚಿಸಿದ್ದಾನೆ. ಈ ಆಸಾಮಿ ನಿರುದ್ಯೋಗಿಗಳನ್ನೇ ಬಂಡವಾಳ ಮಾಡಿಕೊಂಡು ಇಲ್ಲಿಯವರೆಗೂ ಕೋಟಿಗಟ್ಟಲೇ ವಂಚಿಸುತ್ತಲೇ ಬರ್ತಿದ್ದ.
ಹೀಗೆ ಬಂದ ಬಿಟ್ಟಿ ದುಡ್ಡಲ್ಲಿ, ತಿರುಪತಿ, ವೈಷ್ಣೋದೇವಿ ಸೇರಿದಂತೆ ಹಲವೆಡೆ ಹೆಲಿಕಾಪ್ಟರ್ ಬಾಡಿಗೆ ಮಾಡಿಕೊಂಡು ಕುಟುಂಬ ಸಮೇತ ಹೋಗಿಬರ್ತಿದ್ದ ಈ ಖತರ್ನಾಕ್.
ಈತನಿಗೆ 7 ಲಕ್ಷ ಕೊಟ್ಟು ಯಮಾರಿದ್ದ ಚಿಕ್ಕಮಗಳೂರಿನ ಉಮೇಶ್, ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರನ್ನ ಗಂಭೀರವಾಗಿ ಪರಿಗಣಿಸಿದ್ದ ನಗರ ಠಾಣೆ ಇನ್ಸ್ ಪೆಕ್ಟರ್ ತೇಜಸ್ವಿ, ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರ ಜೊತೆ ಮಾತಾಡಿ ಈ ನಕಲಿ ಅಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಲು ಅಖಾಡ ಸಿದ್ದಪಡಿಸಿದ್ದರು.
ಕೊನೆಗೆ ಚಿಕ್ಕಮಗಳೂರಲ್ಲೇ ಆರೋಪಿ ಕೈಗೆ ಕೋಳ ತೊಡಿಸಿದ ಇನ್ಸ್ ಪೆಕ್ಟರ್ ತೇಜಸ್ವಿ ಮತ್ತು ಅವರ ತಂಡ, ಆರೋಪಿಯ ಜನ್ಮ ಜಾಲಾಡಿ, ಸದ್ಯ 80 ಲಕ್ಷದಷ್ಟು ಹಣ ರಿಕವರಿ ಮಾಡಿ ಖತರ್ನಾಕ್ ಆಸಾಮಿಗೆ ಜೈಲಿನ ದಾರಿ ತೋರಿಸಿದ್ದಾರೆ.
ಈ ಕಿಲಾಡಿ ಆಫೀಸರ್, ಕೇವಲ ಕೆಲಸದ ಆಸೆ ತೋರಿಸುತ್ತಿರಲಿಲ್ಲ. ಈತನ ಜೊತೆ ಯಾವಾಗಲೂ ಬಂಡಲ್ ಗಟ್ಟಲೇ ಶಿಕ್ಷಣ ಇಲಾಖೆ, ಇಸ್ರೋ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ನಕಲಿ ಆಫರ್ ಲೆಟರ್ಗಳನ್ನ ಇಟ್ಟುಕೊಳ್ಳುತ್ತಿದ್ದ. ಈ ಆಫರ್ ಲೆಟರ್, ನೇಮಕಾತಿ ಲೆಟರ್ ನೋಡಿದ ಯಾರಿಗೂ ಕೂಡ ಅನುಮಾನವೇ ಬಾರದ ರೀತಿಯಲ್ಲಿ ವ್ಯವಹರಿಸುತ್ತಿದ್ದ. ಕೆಲವರಿಗೆ ಒಂದು ತಿಂಗಳು, ಎರಡು ತಿಂಗಳು ಸಂಬಳ ಕೂಡ ಕೊಟ್ಟು ಮತ್ತಷ್ಟು ಜನರು ಬಲೆಗೆ ಬೀಳುವಂತೆ ಪರೋಕ್ಷವಾಗಿ ಖತರ್ನಾಕ್ ಗೇಮ್ ಆಡುತ್ತಿದ್ದ. ಸದ್ಯ ಈ ಕಿಲಾಡಿ, ನಕಲಿ ಆಫೀಸರನ್ನು ಕಾಫಿನಾಡ ಪೊಲೀಸರು ಲಾಕ್ ಮಾಡಿ ಜೈಲಿಗಟ್ಟಿದ್ದಾರೆ..