ಮಂಗಳೂರು/ ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಅನೇಕ ಜನರು ತಮ್ಮ ಕೃಷಿ ಹಾಗೂ ಪಟ್ಟಾ ಜಮೀನುಗಳನ್ನು ಸರ್ಕಾರಕ್ಕೆ ಬಿಟ್ಟುಕೊಡುವ ಪರಿಸ್ಥಿತಿ ಬಂದಿದೆ. ಹೀಗೆ ಬಿಟ್ಟು ಕೊಟ್ಟ ಜಮೀನಿಗೆ ಪರಿಹಾರ ನೀಡಲಾಗುತ್ತಿದೆಯಾದ್ರೂ ಪರಿಹಾರದ ಹಣಕ್ಕಾಗಿ ಜನರು ಅಲೆದಾಡುವ ಪರಿಸ್ಥಿತಿ ಕೂಡಾ ಇದೆ. ಆದ್ರೆ ಇನ್ನು ಮುಂದೆ ಈ ರೀತಿ ಸ್ವಾಧೀನಪಡಿಸಿದ ಜಮೀನಿಗೆ ಪರಿಹಾರ ನೀಡಲು ವಿಳಂಬವಾದ್ರೆ ಚಿಂತಿಸಬೇಕಾಗಿಲ್ಲ. ಯಾಕಂದ್ರೆ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭೂ ಪರಿಹಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಭೂಮಿ ಕಳೆದುಕೊಳ್ಳುವ ಸಂತ್ರಸ್ತರ ಪರವಾಗಿ ತೀರ್ಪೊಂದನ್ನು ನೀಡಿದೆ. ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ವಿಶೇಷ ಅಧಿಕಾರ ಬಳಸಿಕೊಂಡು ನ್ಯಾಯಾಲಯವು ಈ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ ಇನ್ನು ಮುಂದೆ ಭೂ ಸ್ವಾಧೀನ ಮಾಡಿ ಪರಿಹಾರ ಸಮಯಕ್ಕೆ ಸರಿಯಾಗಿ ನೀಡದೇ ಇದ್ರೆ ಸರ್ಕಾರದ ಬೊಕ್ಕಸಕ್ಕೇ ನಷ್ಟ ಉಂಟಾಗಲಿದೆ. ಯಾಕಂದ್ರೆ ಇನ್ನು ಮುಂದೆ ಸರ್ಕಾರ ಭೂ ಸ್ವಾಧೀನ ಮಾಡಿ ಧೀರ್ಘಕಾಲ ಪರಿಹಾರ ನೀಡದೇ ಇದ್ದರೆ ಪರಿಹಾರ ನೀಡುವ ಸಮಯದಲ್ಲಿನ ಮಾರುಕಟ್ಟೆಯ ದರವನ್ನು ಸಂತ್ರಸ್ತರಿಗೆ ನೀಡಬೇಕಾಗುತ್ತದೆ.
ಯಾವ ಕಾರಣಕ್ಕೆ ಈ ಅದೇಶ ನೀಡಲಾಗಿದೆ..?
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(KIADB) ವಿರುದ್ಧ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ. ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಗಾಗಿ ಸಾವಿರಾರು ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು 2003 ರಲ್ಲಿ KIADB ಅಧಿಸೂಚನೆ ಹೊರಡಿಸಿತ್ತು. ಆದ್ರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡರೂ ಸಂತ್ರಸ್ತರಿಗೆ ಪರಿಹಾರವನ್ನು ನೀಡಿರಲಿಲ್ಲ. ನೋಟಿಫಿಕೇಷನ್ ಬಳಿಕವೂ ಪರಿಹಾರ ಸಿಗದ ಕಾರಣ ಜಮೀನು ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. 2019 ರಲ್ಲಿ ಪರಿಹಾರ ನೀಡಲು KIADB ಮುಂದಾಗಿತ್ತಾದ್ರೂ ಅದು 2003 ರ ಮಾರುಕಟ್ಟೆ ದರವಾಗಿತ್ತು. ಹೀಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪ್ರಕರಣದ ತೀರ್ಪು ಹೊರಬಿದ್ದಿದೆ. ಕೆಐಎಡಿಬಿಯು ಸಂತ್ರಸ್ತರಿಗೆ 2019 ರ ಮಾರುಕಟ್ಟೆ ದರದಲ್ಲೇ ಪರಿಹಾರ ನೀಡಬೇಕು ಎಂದು ಆದೇಶ ನೀಡಿದೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ
ಎಡಪದವು : ಶ್ರೀ ಅಯ್ಯಪ್ಪ ಮಂದಿರ , ಶ್ರೀರಾಮಾನಗರ ಎಡಪದವು ಇಲ್ಲಿನ ಅಯ್ಯಪ್ಪ ವೃತಾಧಾರಿಗಳ ಇರುಮುಡಿ ಕಟ್ಟುವ ಕಾರ್ಯ ಭಾನುವಾರ(ಡಿ.5) ನಡೆಯಿತು.
ಬೆಳಿಗ್ಗೆ ಗುರುಸ್ವಾಮಿಗಳ ಮಾರ್ಗದರ್ಶನದಲ್ಲಿ ಅಯ್ಯಪ್ಪ ಮಲಾಧಾರಿಗಳ ಇರುಮುಡಿ ಕಟ್ಟುವಿಕೆ ನಡೆಯಿತು. ಜೊತೆಗೆ ಭಜನಾ ತಂಡ ಹಾಗೂ ಸ್ಥಳೀಯರಿಂದ ಭಜನಾ ಸಂಕೀರ್ತನೆ ನೆರವೇರಿತು. ಬಳಿಕ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಜರುಗಿತು. ಸಾವಿರಾರು ಭಕ್ತಾಭಿಮಾನಿಗಳು ಪ್ರಸನ್ನ ಕಾಲದಲ್ಲಿ ಪಾಲ್ಗೊಂಡಿದ್ದರು.
ಸುಮಾರು 30 ವರ್ಷಗಳಿಂದ ಅಯ್ಯಪ್ಪ ಮಂದಿರ ಶ್ರೀ ರಾಮನಗರದಲ್ಲಿ ಭಕ್ತರು ಮಾಲೆ ಧರಿಸುತ್ತಾ ಬರುತ್ತಿರುವುದು ವಿಶೇ಼ವೇ ಸರಿ. ಈ ಬಾರಿ 54 ಜನ ಅಯ್ಯಪ್ಪ ಭಕ್ತರು ಮಾಲೆ ಧರಿಸಿ, ಸ್ರದ್ಧಾ ನಿಷ್ಠೆಯಿಂದ ವೃತಾಚಣೆ ಮಾಡಿ ಶಬರಿಮಲೆ ಯಾತ್ರೆಗೆ ತೆರಳಿದ್ದಾರೆ.
ಸಂಜೆ 4.30 ರ ಸುಮಾರಿಗೆ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿದ್ದು, ಅದಾದ ಬಳಿಕ ವೃತಾಧಾರಿಗಳು ಕಟ್ಟು ಹೊತ್ತು ಶಬರಿಮಲೆ ಯಾತ್ರೆಗೆ ತೆರಳಿದರು.
ಮಂಗಳೂರು : ತನ್ನ ಛಲ, ಹಠ ಮತ್ತು ಕಠಿಣ ಪರಿಶ್ರಮದ ಮೂಲಕ ಎನ್ ಸಿಸಿಯ ಪ್ಯಾರ ಜಂಪಿಂಗ್ ಪರೀಕ್ಷೆಯಲ್ಲಿ ಕುಮಾರಿ ಪ್ರತಿಕ್ಷಾ ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಈ ಸಾಧನೆ ಮೆರೆದ ದಕ್ಷಿಣ-ಕನ್ನಡ ಜಿಲ್ಲೆಯ ಪ್ರಪ್ರಥಮ ಗ್ರಾಮೀಣ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾರೆ.
ಮಂಗಳೂರು ತಾಲೂಕಿನ ಕುಳವೂರು ಗ್ರಾಮದ ಬೊಳಿಯದ ಪ್ರೇಮ ಪೂಜಾರಿ ಹಾಗೂ ಪ್ರಕಾಶ್ ಪೂಜಾರಿಯವರ ಮಗಳು, ಮೂಡಬಿದ್ರಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪ್ರತಿಕ್ಷಾ 2024ರ ನವೆಂಬರ್ 1 ರಿಂದ 25ರವೆರೆಗೆ ಉತ್ತರ ಪ್ರದೇಶದ ಆಗ್ರಾದ ಎಎಟಿಸಿ( Army Airborne Training Centre)ಯಲ್ಲಿ ನಡೆದ ರಾಷ್ಟ್ರ ಮಟ್ಟದ ಪ್ಯಾರ ಜಂಪ್ ಕ್ಯಾಂಪ್ (All India Parajump Camp) ನ್ನು ಯಶಸ್ವಿಯಾಗಿ ಮುಗಿಸಿದ ಅಪ್ಪಟ ಗ್ರಾಮೀಣ ಪ್ರತಿಭೆ. ಮಂಗಳೂರು ತಾಲೂಕು ಕೊಳವೂರು ಗ್ರಾಮದ ಬೊಳಿಯ ಸರಕಾರಿ ಉನ್ನತಿಕೃತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ವರೆಗೆ ವ್ಯಾಸಂಗ ಮಾಡಿದ ಬಳಿಕ ಕಾರ್ಕಳದ ಕೊಳಕ್ಕೆ ಇರ್ವತ್ತೂರು ಮೈಂದೊಟ್ಟುವಿನಲ್ಲಿ ವಾಸವಾಗಿದ್ದಾರೆ.
ಸತತ ಪರಿಶ್ರಮದ ಫಲ :
ದೇಶದಾದ್ಯಂತ 20 ಲಕ್ಷಕ್ಕೂ ಅಧಿಕ ಎನ್ ಸಿಸಿ ಕೆಡೆಟ್ ಗಳಲ್ಲಿ ಆಯ್ಕೆಯಾಗಿದ್ದ 100 ಕೆಡೆಟ್ ಗಳ ಪೈಕಿ ಕರ್ನಾಟಕ – ಗೋವಾ ಡೈರೆಕ್ಟರೇಟ್ ವ್ಯಾಪ್ತಿಯ ಮಂಗಳೂರು ಎನ್ ಸಿಸಿ 6ನೇ (ಕಾರ್) KAR ಏರ್ ಸ್ಕ್ಯಾಡ್ರೆನ್ ನ ಆಳ್ವಾಸ್ ಕಾಲೇಜಿನ ಎನ್ ಸಿಸಿ ಯಿಂದ ತರಬೇತಿಗೆ ಆಯ್ಕೆಯಾದ ಪ್ರತೀಕ್ಷಾ ಮೂರು ಪ್ಯಾರಾ ಜಂಪ್ ಗಳನ್ನು ಯಶಸ್ವಿಯಾಗಿ ಪೂರೈಸಿದವರು. ಪ್ರತಿದಿನ ರನ್ನಿಂಗ್, ಪುಶ್ ಅಪ್, ಫುಲ್ಲಪ್ ಸೇರಿದಂತೆ ಸತತ ಪರಿಶ್ರಮ, ಕಠಿಣ ತರಬೇತಿ ಮತ್ತು ದೈಹಿಕ ಕ್ಷಮತೆಯನ್ನು ಬಯಸುವ ಪ್ಯಾರಾ ಜಂಪ್ ಸುಲಭದ ಕೆಲಸವಲ್ಲ.
ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿಯನ್ನು ನೀಡಿದ ಬಳಿಕ ಕೆಡೆಟ್ ಗಳ ಎತ್ತರದ ಭಯವನ್ನು ನಿವಾರಿಸಲು ಹಲವು ಹಂತಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕನಿಷ್ಠ 30 ಅಡಿ ಎತ್ತರದಿಂದ ಪ್ರಾರಂಭವಾಗುವ ಹಂತ ಹಂತದ ಪರೀಕ್ಷೆಗಳ ಬಳಿಕ 1250 ಅಡಿ ಎತ್ತರದಿಂದ ಪ್ಯಾರಾ ಜಂಪಿಂಗ್ ಪರೀಕ್ಷೆ ನಡೆಸಲಾಗುತ್ತದೆ. ಹೀಗೆ ವಿವಿಧ ಹಂತದ ಪರೀಕ್ಷೆಗಳನ್ನು ಎದುರಿಸಿ, ಮೂರು ಪ್ಯಾರಾ ಜಂಪ್ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿದ ಹೆಮ್ಮೆ ಪ್ರತೀಕ್ಷಾ ಅವರದು.
ಇದನ್ನೂ ಓದಿ :
ಸೇನೆಗೆ ಸೇರುವ ಆಸೆ :
ಬಾಲ್ಯದಿಂದಲೇ ಸೇನೆಗೆ ಸೇರಬೇಕು ಎಂಬ ಅಸೆ ಚಿಗುರಿದ್ದು ಪ್ರತೀಕ್ಷಾ ಅವರ ಅಣ್ಣ ಪ್ರಜ್ವಲ್ ಅವರಿಂದ. ಪ್ರಜ್ವಲ್ ಪೂಜಾರಿಯವರು ಸೈನಿಕನಾಗಿದ್ದು ಅವರೇ ನನಗೆ ಸ್ಫೂರ್ತಿ ಎನ್ನುತ್ತಾರೆ ಪ್ರತೀಕ್ಷಾ. ಪ್ಯಾರಾ ಜಂಪ್ ಪರೀಕ್ಷೆ ತೇರ್ಗಡೆಯಾಗಿರುವುದು ಪ್ರತೀಕ್ಷಾ ಅವರಿಗೆ ವಾಯುಪಡೆಗೆ ಸೇರಲು ಸಹಕಾರಿಯಾಗಿದೆ. ಅಲ್ಲದೇ ಯಾವುದೇ ಸರಕಾರಿ ಉದ್ಯೋಗಕ್ಕೆ ಆಯ್ಕೆ ಸಂದರ್ಭ ಪ್ಯಾರಾ ಜಂಪ್ ನ ವಿಶೇಷ ಅಂಕಗಳು ಪರಿಗಣನೆಗೆ ಬರುತ್ತವೆ.
ಆರ್ಥಿಕವಾಗಿ ಸದೃಢವಲ್ಲದ ಕುಟುಂಬದ, ಕುಳವೂರಿನ ಅಪ್ಪಟ ಗ್ರಾಮೀಣ ಬಾಲೆಯ ಈ ಸಾಧನೆಗೆ ಗ್ರಾಮಸ್ಥರಿಂದ ಸಂತಸ ವ್ಯಕ್ತವಾಗಿದೆ.
ಸುಳ್ಯ: ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ದೇವರ ಕೊಲ್ಲಿಯಲ್ಲಿಯ 10ನೇ ಮೈಲಿನಲ್ಲಿ ಜ.4 ರಂದು ನಡೆದಿದೆ.
ದೇವರಕೊಲ್ಲಿಯ ಸ್ಥಳೀಯ ನಿವಾಸಿ ಮುತ್ತು ಕಾಡಾನೆ ದಾಳಿಗೊಳಗಾದ ವ್ಯಕ್ತಿ.
ಮುತ್ತು ಅವರು ಎಸ್ಟೇಟ್ ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾಡಾನೆಯೊಂದು ದಿಡೀರ್ ದಾಳಿ ಮಾಡಿದೆ.
ಈ ಸಂದರ್ಭ ಮುತ್ತು ಓಡಿ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಯು ಸ್ಕೂಟಿಯನ್ನು ಜಖಂಗೊಳಿಸಿದ್ದು, ಗಾಯಳುವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.