ಬೆಂಗಳೂರು: ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗೂ ಪುನೀತ್ ನಟನೆಯ ‘ಜೇಮ್ಸ್’ ಯಾವುದೇ ಸಂಬಂಧವಿಲ್ಲ. ದಿ ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಜೇಮ್ಸ್ ಸಿನಿಮಾಗೆ ತೊಂದರೆಯಿಲ್ಲ’ ಎಂದು ನಟ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಒಳ್ಳೆಯ ಸಿನಿಮಾ ಇದ್ದಾಗ ಅದಕ್ಕೆ ಕೈಕೊಡಬಾರದು. ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಮಾ.17ರಂದು ತೆರೆಕಂಡಿತು. ಇಂಥ ಚಿತ್ರಕ್ಕೆ ಬೇರೆ ಭಾಷೆಯ ಸಿನಿಮಾಗಳಿಂದ ತೊಂದರೆ ಆಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ನಿನ್ನೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿ ಕಾಶ್ಮೀರ ಫೈಲ್ಸ್ ಚಿತ್ರದಿಂದ ಅಪ್ಪು ಸಿನಿಮಾಕ್ಕೆ ತೊಂದರೆಯಾಗುತ್ತಿದೆ ಎಂದಿದ್ದರು.
ಇದೇ ವೇಳೆ ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆಂಬ ಸುದ್ದಿ ಸಂಪೂರ್ಣ ಸುಳ್ಳು. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಸ್ಥರೊಡನೆ ಮಾತನಾಡಿ, ಜೇಮ್ಸ್ ಚಲನಚಿತ್ರಕ್ಕೆ ನಮ್ಮ ಬೆಂಬಲವಿದ್ದು, ಚಿತ್ರಪ್ರದರ್ಶನಕ್ಕೆ ನಮ್ಮ ಸರ್ಕಾರ ಸಂಪೂರ್ಣ ಸಹಕರಿಸಲಿದೆ ಎಂದು ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.