ಅನುಮಾನ ಅನ್ನೋದು ದೊಡ್ಡ ಪಿಡುಗು ಎಂದರೆ ತಪ್ಪಾಗಲಾರದು. ಸುಂದರ ಸಂಸಾರವ ಒಡೆದು ಹಾಕಲು ಅನುಮಾನವೆಂಬ ಒಂದು ಬೀಜ ಇದ್ದರೆ ಸಾಕು. ಅದೆಷ್ಟೋ ಸಂಸಾರಗಳು ಹಾಳಾಗಿರುವುದು ಅನುಮಾನ ಅನ್ನೋ ಕೆಟ್ಟ ಚಾಳಿಯಿಂದಾಗಿ ಎನ್ನಬಹುದು.
ಅದೇ ರೀತಿ, ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಅನುಮಾನಪಡಲು ಹೋಗಿ ದೊಡ್ಡ ಸಂಕಷ್ಟಕ್ಕೆ ಸುಲುಕಿಕೊಂಡ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
ಪತ್ನಿಯ ನಡವಳಿಕೆ ಮೇಲೆ ಅನುಮಾನ :
ಪತ್ನಿಯ ನಡವಳಿಕೆಯ ಮೇಲಿನ ಅನುಮಾನದಿಂದ ಕಾನ್‌ಸ್ಟೆಬಲ್ ರಾಕೇಶ್ ಕುಮಾರ್ ಆಕೆಯನ್ನು ಪರೀಕ್ಷಿಸಲು ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಿ, ಅದರಿಂದ ಮೆಸೆಜ್ ಮಾಡಲು ಮುಂದಾಗಿದ್ದಾನೆ. ದುರಂತ ತಾನು ಬೀಸಿದ ಗಾಳಕ್ಕೆ ತಾನೇ ಸಿಲುಕಿಕೊಂಡಿದ್ದಾನೆ. ಪತ್ನಿಯಲ್ಲಿರುವ ತಪ್ಪನ್ನು ಬಹಿರಂಗಪಡಿಸುವ ಬದಲು ಆತನ ವಂಚನೆಯೇ ಬೆಳಕಿಗೆ ಬಂದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಂತರ ಪೊಲೀಸರು ಆರೋಪಿ ಪತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು :
ಜೂನ್ 21, 2024 ರಂದು, ಮಹಿಳೆ ಹರ್ದೋಯ್‌ನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು, “ಗೌರವ್ ಕುಮಾರ್” ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಅಸಭ್ಯ ಸಂದೇಶಗಳನ್ನು ಮಾಡಲಾಗುತ್ತಿದೆ ಎಂದು ಅಲ್ಲಿ ಬರೆದುಕೊಂಡಿದ್ದರು. ಆಕೆಯ ಹೇಳಿಕೆಯ ಪ್ರಕಾರ, ‘ಸಂದೇಶಗಳಲ್ಲಿ ಭಾಭಿ ಜೀ, ನೀವು ತುಂಬಾ ಹಾಟ್ ಆಗಿದ್ದೀರಿ’ ಎಂಬಂತಹ ಅನುಚಿತ ಕಾಮೆಂಟ್‌ಗಳನ್ನು ಒಳಗೊಂಡಿತ್ತು, ಜೊತೆಗೆ ‘ಫ್ಲರ್ಟ್’ ಮಾಡಲು ನಿರಂತರ ಪ್ರಯತ್ನ ಮಾಡುವಂತೆ ತೋರುತ್ತಿತ್ತು.
‘ನನಗೆ ಈ ವ್ಯಕ್ತಿಯ ಪರಿಚಯ ಇಲ್ಲ, ಅವನ ಸಂದೇಶಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ನಾನು ಅವರನ್ನು ಬ್ಲಾಕ್ ಮಾಡಿದರೂ ಬೇರೆ ಬೇರೆ ಖಾತೆಗಳಿಂದ ನನಗೆ ಸಂದೇಶ ಕಳುಹಿಸುತ್ತಲೇ ಇದ್ದಾನೆ. ಇದರಿಂದ ನನಗೆ ಬಹಳ ಸಮಸ್ಯೆ ಆಗಿದೆ, ನನಗೆ ಸಹಾಯ ಮಾಡಿ’ ಎಂದು ಸೈಬರ್ ಠಾಣೆ ಮೆಟ್ಟಿಲೇರಿದ್ದರು.
ತನಿಖೆಯಿಂದ ಬಯಲಾದ ಆಘಾತಕಾರಿ ಸತ್ಯ :
ಅಧಿಕಾರಿಗಳು ತಮ್ಮ ತನಿಖೆಯನ್ನು ಪ್ರಾರಂಭಿಸಿದಾಗ, ನಕಲಿ ಇನ್‌ಸ್ಟಾಗ್ರಾಮ್ ಐಡಿಯನ್ನು ಆಪರೇಟ್ ಮಾಡಿದ್ದು ಬೇರಾರೂ ಅಲ್ಲ ಮಹಿಳೆಯ ಪತಿ ರಾಕೇಶ್ ಕುಮಾರ್ ಅನ್ನೋದು ತಿಳಿದುಬಂದಿದೆ. ರಾಯ್‌ಬರೇಲಿ ಪೊಲೀಸ್ ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾನ್‌ಸ್ಟೆಬಲ್ ತನ್ನ ಪತ್ನಿಯ ಬಗ್ಗೆ ಅನುಮಾನೊಂಡು ಈ ರೀತಿ ಮೆಸೆಜ್‌ಗಳನ್ನು ಮಾಡುತ್ತಿದ್ದನಂತೆ. ಆದರೆ ಈಗ ಬೇರೆಯವರ ತಪ್ಪನ್ನು ಕಂಡುಹಿಡಿಯಲು ಹೋಗಿ ತಾನೇ ದೊಡ್ಡ ತಪ್ಪು ಮಾಡಿ ಬಂಧಿಯಾಗಿದ್ದಾನೆ.
ಈ ನಡುವೆ ಸರ್ಕಲ್ ಆಫೀಸರ್ (ಸಿಒ) ಸೂಚನೆ ಮೇರೆಗೆ ರಾಕೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯನ್ನು ಸಬ್ ಇನ್ಸ್‌ಪೆಕ್ಟರ್ ನಿರ್ವಹಿಸುತ್ತಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿ, ಮಹಿಳೆ ಈಗಾಗಲೇ ತನ್ನ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸಿದ್ದರು. ಇತ್ತೀಚಿನ ಘಟನೆ ಕಾನ್‌ಸ್ಟೆಬಲ್‌ನ ಇಮೇಜ್‌ಗೆ ಮತ್ತಷ್ಟು ಕಳಂಕ ತಂದಿದೆ. ಅವರ ನಡವಳಿಕೆಯ ಬಗ್ಗೆ ಗಂಭೀರ ಕಳವಳವನ್ನು ಸಹ ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ಈ ಘಟನೆ ಸಹ ಎತ್ತಿ ತೋರಿಸುತ್ತದೆ.