ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತ ಪ್ರಕರಣ; 9 ದಿನವಾದರೂ ಸಿಗದ ಸುಳಿವು..!
ಮಡಿಕೇರಿ : ಜಿಲ್ಲೆಯ ಪವಿತ್ರ ಧಾರ್ಮಿಕ ಸ್ಥಳ ತಲಕಾವೇರಿಯ ಬೃಹ್ಮಗಿರಿ ಬೆಟ್ಟ ಕುಸಿದು 9 ದಿನವಾದರೂ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಸೇರಿದಂತೆ ಕಣ್ಮರೆಯಾಗಿದ್ದ ಐದು ಜನರ ಪೈಕಿ ಮೂವರು ಬರೋಬ್ಬರಿ ಎಂಟು ದಿನಗಳಾದರೂ ಮೂವರ ಯಾವುದೇ ಸುಳಿವು ಸಿಕ್ಕಿಲ್ಲ.
ಮೂವರ ಸುಳಿವು ಸಿಗದಿರುವುದು ರಕ್ಷಣಾ ತಂಡಗಳಿಗೆ ತಲೆನೋವಾಗಿದೆ. ಆಗಸ್ಟ್ 8 ರಂದು ನಾರಾಯಣ ಆಚಾರ್ ಅವರ ಸಹೋದರ ಆನಂದತೀಥ ಅವರ ಮೃತದೇಹ ದೊರೆತಿತ್ತು.
ಬಳಿಕ ಮಾರ್ಚ್ 11 ರಂದು ಅರ್ಚಕ ನಾರಾಯಣ ಆಚಾರ್ ಅವರ ಮೃತದೇಹ ದೊರೆತಿತ್ತು. ಅವರಿಬ್ಬರ ಮೃತದೇಹಗಳು ದೊರೆತ ಸ್ಥಳದಿಂದ ಇನ್ನೂ ಮುಂದಕ್ಕೆ ಉಳಿದ ಮೂವರ ಪತ್ತೆಗಾಗಿ ಹುಡುಕಾಟ ಆರಂಭಿಸಲಾಗಿದೆ.
ಬೆಟ್ಟ ಕುಸಿಯುವುದಕ್ಕೂ ಮೊದಲು ಮನೆ ಇದ್ದ ಸ್ಥಳದಿಂದ ಬರೋಬ್ಬರಿ ನಾಲ್ಕು ಕಿಲೋಮೀಟರ್ ದೂರದಲ್ಲಿ ಈ ಮೂವರು ಪತ್ತೆಯಾಗಬಹುದಾ ಎಂಬ ಆಶಾವಾದದೊಂದಿಗೆ ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್, ಅಗ್ನಿಶಾಮಕ ದಳ ಪೊಲೀಸ್ ಸೇರಿದಂತೆ 75 ಕ್ಕೂ ಹೆಚ್ಚು ಸಿಬ್ಬಂದಿ ಮೂರು ನಾಲ್ಕು ತಂಡಗಳಾಗಿ ಹುಡುಕುವ ಕಾರ್ಯ ಮುಂದುವರೆಸಿದ್ದಾರೆ.
ಇನ್ನು ಭೂಕುಸಿತವಾದ ಸ್ಥಳಕ್ಕೆ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಣೆಯಾದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದ ವಿವಿಧ ರಕ್ಷಣಾ ತಂಡದ ಸಿಬ್ಬಂಧಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದ್ದಾರೆ.