ಕಾರವಾರ: ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದಲ್ಲಿ ಉಗ್ರಗಾಮಿಯ ಪತ್ನಿಯನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಟ್ಕಳದ ಜಾಲಿ ಕ್ರಾಸ್ ನಿವಾಸಿ, ಉಗ್ರಗಾಮಿ ಸದ್ದಾಂ ಹುಸೇನ್ ಪತ್ನಿ ಸಾಯಿರಾಳನ್ನು ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಹದಿನೈದು ದಿನದ ಹಿಂದೆ ಶಿವಮೊಗ್ಗ ಮೂಲದ ಶರತ್ ಎಂಬ ಉದ್ಯಮಿಗೆ ಅಪರಿಚಿತರಿಂದ ಜೀವ ಬೆದರಿಕೆಯ ಕರೆ ಬಂದಿತ್ತು. ಹೆಬ್ಬೆಟ್ ಮಂಜನ ಹೆಸರಿನಲ್ಲಿ ಉದ್ಯಮಿಗೆ ಆನ್‌ಲೈನ್ ಕರೆ ಮಾಡಿದ್ದ ದುಷ್ಕರ್ಮಿಗಳು, ಜೀವ ಬೆದರಿಕೆಯೊಡ್ಡಿದ್ದರು.
ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ದುಷ್ಕರ್ಮಿಗಳು ಹೆದರಿಸಿದ್ದರು. ದುಷ್ಕರ್ಮಿಗಳ ಕರೆಗೆ ಹೆದರಿಕೊಂಡು ಉದ್ಯಮಿ ಶರತ್ ಈ ಹಿಂದೆ ಸುಮಾರು 1 ಲಕ್ಷ ರೂ.ವರೆಗೆ ಹಣ ವರ್ಗಾವಣೆ ಮಾಡಿದ್ದರು.
ಆದರೆ, ಮತ್ತಷ್ಟು ಹಣಕ್ಕಾಗಿ ಟಾರ್ಚರ್ ಕೊಟ್ಟಾಗ ಉದ್ಯಮಿ ಪೊಲೀಸರ ಮೊರೆ ಹೋಗಿದ್ದರು. ದುಷ್ಕರ್ಮಿಗಳು ಹಣ ವರ್ಗಾವಣೆ ಮಾಡಲು ನೀಡಿದ್ದ ಖಾತೆಯನ್ನು ಪರಿಶೀಲಿಸಿದಾಗ ಭಟ್ಕಳದ ಲಿಂಕ್ ಬೆಳಕಿಗೆ ಬಂದಿತ್ತು.
ಹಣ ವರ್ಗಾವಣೆಗೆ ದುಷ್ಕರ್ಮಿಗಳು ಭಟ್ಕಳದ ಸಾಯಿರಾಳ ಖಾತೆಯ ವಿವರ ನೀಡಿದ್ದರು. ಜೀವ ಭಯದಿಂದ ದುಷ್ಕರ್ಮಿಗಳು ನೀಡಿದ್ದ ಸಾಯಿರಾಳ ಬ್ಯಾಂಕ್ ಖಾತೆಗೆ ಉದ್ಯಮಿಯು ಹಣ ವರ್ಗಾವಣೆ ಮಾಡಿದ್ದ. ಖಾತೆಯ ಮಾಹಿತಿ ಆಧರಿಸಿ ತನಿಖೆ ಪ್ರಾರಂಭಿಸಿದ್ದ ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು,
ಖಾತೆಯ ಮಾಹಿತಿ ಪಡೆದು ಭಟ್ಕಳದ ಸಾಯಿರಾಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದಿಂದ ಭಟ್ಕಳಕ್ಕೆ ಬಂದಿದ್ದ ಶಿವಮೊಗ್ಗ ಸೈಬರ್ ಅಪರಾಧ ಠಾಣಾ ಪೊಲೀಸರು, ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ದಿದ್ದಾರೆ.
ಪ್ರಸ್ತುತ ಮಹಿಳೆಗೂ ಹಾಗೂ ಜೀವ ಬೆದರಿಕೆ ನೀಡಿದ ದುಷ್ಕರ್ಮಿಗಳಿರುವ ಸಂಬಂಧದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
2015ರಲ್ಲಿ ಬೆಂಗಳೂರಿನ ಪುಲಕೇಶಿ ನಗರ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಬ್ ಬ್ಲಾಸ್ಟ್ ಆರೋಪಿಯಾಗಿರುವ ಉಗ್ರಗಾಮಿ ಸದ್ದಾಂ ಹುಸೇನ್, ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ.
ಈತ 35 ವರ್ಷಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಜಾಲಿ ನಗರ ವ್ಯಾಪ್ತಿಯಲ್ಲಿ ಕುಟುಂಬ ಸಮೇತ ಮನೆ ಮಾಡಿಕೊಂಡು ವಾಸಿಸುತ್ತಿದ್ದ. ಸ್ಥಳೀಯವಾಗಿ ಗುಜರಿ ವ್ಯಾಪಾರಿಯಂತೆ ಗುರುತಿಸಿಕೊಂಡಿದ್ದ ಈತ,
ಬ್ಲಾಸ್ಟಿಂಗ್‌ಗೆ ಬಾಂಬ್ ತಯಾರಿಸಲು ಜಿಲೆಟಿನ್‌ಗಳನ್ನು ಪೂರೈಸುತ್ತಿದ್ದ. ಈ ಆರೋಪದ ಮೇರೆಗೆ ಸಿಸಿಬಿ ಪೊಲೀಸರು 2015ರಲ್ಲಿ ಭಟ್ಕಳದಲ್ಲಿ ಈತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಉಗ್ರ ಸಂಘಟನೆಗಳ ಸಂಬಂಧದ ಬಗ್ಗೆ ಬಾಯ್ಬಿಟ್ಟಿದ್ದ. ಸದ್ದಾಂ ಹುಸೇನ್ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾನೆ.
ಸದ್ದಾಂಗೆ ಪತ್ನಿ ಸಾಯಿರಾ ಹಾಗೂ ಮೂವರು ಮಕ್ಕಳಿದ್ದರು. ತಂದೆ, ತಾಯಿ, ತಂಗಿಯರು ಕೂಡ ಭಟ್ಕಳದಲ್ಲೇ ವಾಸ ಮಾಡುತ್ತಿದ್ದಾರೆ.