ಬೆಂಗಳೂರು : ಎನ್ ಐ ಎ ಅಧಿಕಾರಿಗಳು ಬೆಂಗಳೂರಿನಲ್ಲಿ ಉಗ್ರ ಸಂಘಟನೆ ಐಸಿಸಿ ನೊಂದಿಗೆ ಸಂಪರ್ಕಹೊಂದಿದ್ದ ವೈದ್ಯಕೀಯ ವಿಧ್ಯಾರ್ಥಿಯೊಬ್ಬನನ್ನು ಇಂದು ಬಂಧಿಸಿದ್ದಾರೆ. ಅಬ್ದುಲ್ ರೆಹಮಾನ್ ಬಂಧಿತ ಶಂಕಿತ ಉಗ್ರ. ಬೆಂಗಳೂರಿನ ಬಸವನಗುಡಿಯಲ್ಲಿ ಈತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಹೊಸದಿಲ್ಲಿಯ ಎನ್ಐಎ ಅಧಿಕಾರಿಗಳು ಈ ಕಾರ್ಯಾಚರಣೆ ನಡೆಸಿದ್ದಾರೆ. ಇಸ್ಲಾಮಿಕ್ ಸ್ಟೇಟ್ ಕೊರೋಸನ್ ಪ್ರಾವಿನ್ಸ್ (ISKP) ಎಂಬ ಸಂಘಟನೆ ಜತೆ ಅಬ್ದುಲ್ ರೆಹಮಾನ್ ನಂಟು ಹೊಂದಿದ್ದಾನೆ ಎಂದು ಹೇಳಲಾಗಿದೆ.

ದಾಳಿ ವೇಳೆ ಫೋನ್, ಲ್ಯಾಪ್ ಟಾಪ್ ಹಾಗೂ ಡಿಜಿಟಲ್ ಡಿವೈಸ್ ಗಳನ್ನ ಎನ್‍ಐಎ ವಶಪಡಿಸಿಕೊಂಡಿದೆ. ವಿಚಾರಣೆ ವೇಳೆ, ತನಗೆ ಐಸಿಸ್ ನಂಟಿರುವ ಬಗ್ಗೆ ರೆಹಮಾನ್ ಒಪ್ಪಿಕೊಂಡಿದ್ದಾನೆ. ಸ್ಥಳೀಯ ಐಸಿಸ್ ಉಗ್ರರಿಗೆ ವೈದ್ಯಕೀಯ ವಿಚಾರದಲ್ಲಿ ನೆರವಾಗಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.
2014ರಲ್ಲಿ ಸಿರಿಯಾಗೆ ಭೇಟಿ ನೀಡಿದ್ದು, ಈ ವೇಳೆ ಐಸಿಸ್ ಉಗ್ರರಿಗೆ ಚಿಕಿತ್ಸೆ ನೀಡಿದ್ದೇನೆ. ಅಲ್ಲದೆ 10 ದಿನಗಳ ಕಾಲ ಸಿರಿಯಾದಲ್ಲಿದ್ದು ಚಿಕಿತ್ಸೆ ನೀಡಿ ವಾಪಸ್ ಆಗಿದ್ದರ ಬಗ್ಗೆಯೂ ಅಬ್ದುರ್ ರೆಹಮಾನ್ ತಿಳಿಸಿದ್ದಾನೆ. ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆ ಹಾಗೂ ಸಹೋದರ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಪ್ರಾಂತ್ಯ (ಐಎಸ್‌ಕೆಪಿ) ಉಗ್ರರ ಜೊತೆ ನಂಟು ಹೊಂದಿದ್ದ ಅಬ್ದುಲ್,ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದ. ಇಲ್ಲಿಂದಲೇ ಸಂಘಟನೆಯ ಇತರೆ ಸದಸ್ಯರ ಜೊತೆ ಸಂಪರ್ಕ ಸಾಧಿಸುತ್ತಿದ್ದ ಎನ್ನಲಾಗಿದೆ.
ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ 2014ರಲ್ಲಿ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ್ದ ಅಬ್ದುಲ್, 2017ರಲ್ಲಿ ಸರ್ಕಾರಿ ಕೋಟಾದಡಿ ಎಂ.ಎಸ್ ವ್ಯಾಸಂಗಕ್ಕಾಗಿ ಅದೇ ಕಾಲೇಜಿಗೆ ಸೇರಿದ್ದ. ಇದೇ ಜುಲೈನಲ್ಲಿ ಅಂತಿಮ ಪರೀಕ್ಷೆಯನ್ನೂ ಬರೆದಿದ್ದ. ಕಾಲೇಜಿನ ಹೊರಗೆ ಆತನ ಚಟುವಟಿಕೆಗಳ ಬಗ್ಗೆ ನಮಗೆ ಗೊತ್ತಿರಲಿಲ್ಲ’ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲೇ ಭಯೋತ್ಪಾದನಾ ದಾಳಿ ನಡೆಸಲು ಐಎಸ್‌ಕೆಪಿ ಸಂಚು ರೂಪಿಸಿತ್ತು. ಅದನ್ನು ಪತ್ತೆ ಹಚ್ಚಿದ್ದ ಎನ್‌ಐಎ ಅಧಿಕಾರಿಗಳು, ಪುಣೆಯ ಸಾದಿಯಾ ಅನ್ವರ್ ಹಾಗೂ ನಬೀಲ್ ಸಿದ್ಧಿಕಿ ಖತ್ರಿ ಸೇರಿದಂತೆ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು.ಬಂಧಿತ ಆರೋಪಿಗಳ ಜೊತೆಯೂ ಅಬ್ದುಲ್ ರೆಹಮಾನ್ ನಂಟು ಹೊಂದಿದ್ದ. ಬಂಧಿತ ಆರೋಪಿಗಳು ನೀಡಿದ ಮಾಹಿತಿಯಂತೆ ಎನ್‌ಐಎ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಅಬ್ದುಲ್‌ನನ್ನು ಸೆರೆ ಹಿಡಿದಿದ್ದಾರೆ.