ತ್ರಿಪುರಾ: 15 ವರ್ಷದ ಬಾಲಕನೊಬ್ಬ ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಂದು, ಸೆಪ್ಟಿಕ್ ಟ್ಯಾಂಕ್‌ನಲ್ಲಿ ಶವಗಳನ್ನು ಹೂತು ಹಾಕಿದ ಭಯಾನಕ ಘಟನೆ ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ನಡೆದಿದೆ.
ಧಲೈ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ದುರೈ ಶಿಬ್ ಬಾರಿ ಎಂಬ ಗ್ರಾಮದಲ್ಲಿ ಶನಿವಾರ ರಾತ್ರಿ ಈ ಘಟನೆ ಜರುಗಿದೆ. ಅಜ್ಜ ಬಾದಲ್ ದೇಬನಾಥ್ (70), ತಾಯಿ ಸಮಿತಾ ದೇಬನಾಥ್ (32), ಚಿಕ್ಕಮ್ಮ ರೇಖಾ ದೇಬ್ (42) ಮತ್ತು 10 ವರ್ಷದ ಬಾಲಕಿ ಆರೋಪಿ ಬಾಲಕನ ಕೈಯಲ್ಲಿ ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆನ್ಲೈನ್ ಗೇಮ್ ವ್ಯಸನಿಯಾಗಿದ್ದ. ಇದಕ್ಕಾಗಿ ಮನೆಯಲ್ಲಿ ಆಗಾಗ್ಗೆ ಹಣ ಕದಿಯುತ್ತಿದ್ದ ಎಂದು ದೇಬನಾಥ್ ದೂರಿನಲ್ಲಿ ತಿಳಿಸಿದ್ದಾರೆ
ರಾತ್ರಿ ಮಲಗಿದ್ದಾಗ ಕೊಡಲಿಯಿಂದ ಕೊಚ್ಚಿ ನಾಲ್ವರನ್ನು ಕೊಲೆ ಮಾಡಲಾಗಿದೆ. ಶವಗಳು ಮನೆಯ ಹಿಂದೆ ನಿರ್ಮಾಣ ಹಂತದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನಲ್ಲಿ ದೊರೆತಿವೆ.
ಬಸ್ ಕಂಡಕ್ಟರ್ ಆಗಿರುವ ಬಾಲಕನ ತಂದೆ ಹರದನ್ ದೇಬನಾಥ್ ಮಧ್ಯರಾತ್ರಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ .