ಮಂಗಳೂರು/ಮೆಲ್ಬೋರ್ನ್: ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ 2025ರ ಫೈನಲ್ ಪಂದ್ಯವು ಜೂನ್ 11 ರಿಂದ 15 ರವರೆಗೆ ನಡೆಯಲಿದೆ. ಲಂಡನ್ ಲಾರ್ಡ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಸೌತ್ ಆಫ್ರಿಕಾ ತಂಡ ಅರ್ಹತೆ ಪಡೆದುಕೊಂಡಿದೆ.
ಇದೀಗ ಫೈನಲ್ ಗೇರುವ 2ನೇ ತಂಡದ ರೇಸ್ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳಿದ್ದು, ಉಭಯ ತಂಡಗಳಲ್ಲಿ ಒಂದು ಟೀಮ್ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಆಡಲಿದೆ.
ಭಾರತ ತಂಡವು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸೋತಿದೆ. ಆದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ (ಡಬ್ಲ್ಯುಟಿಸಿ) ಫೈನಲ್ ತಲುಪುವ ಸಾಧ್ಯತೆ ಇದೆ. ಬಾರ್ಡರ್-ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಸಿಡ್ನಿಯಲ್ಲಿ ಮುಂದಿನ ವಾರ ನಡೆಯಲಿದೆ. ಅದರಲ್ಲಿ ಭಾರತ ತಂಡವು ಜಯಿಸಬೇಕು. ನಂತರ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ಎದುರಿನ ಸರಣಿಯಲ್ಲಿ ಸೋಲಬೇಕು ಅಥವಾ ಎರಡೂ ಪಂದ್ಯಗಳು ಡ್ರಾ ಆಗಬೇಕು.
ಸೋಮವಾರ ಭಾರತ ತಂಡವು ಸೋತ ನಂತರ ಪಾಯಿಂಟ್ ಪರ್ಸಂಟೇಜ್ (ಪಿಸಿಟಿ) 52.78ಕ್ಕೆ ಇಳಿಯಿತು. ಮೊದಲು 55.89 ಇತ್ತು. ಅದೇ ಆಸ್ಟ್ರೇಲಿಯಾ ತಂಡದ ಪಾಯಿಂಟ್ ಪರ್ಸಂಟೇಜ್ 61.46ಕ್ಕೇರಿತು.
ಇದನ್ನೂ ಓದಿ: ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ; ಸಿಎಂ ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ ?
ಇನ್ನೂ ದಕ್ಷಿಣ ಆಫ್ರಿಕಾ ತಂಡವು ಭಾನುವಾರ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಡಬ್ಲ್ಯುಟಿಸಿ ಫೈನಲ್ ಸ್ಥಾನ ಖಚಿತಪಡಿಸಿಕೊಂಡಿದೆ. ಎರಡನೇ ತಂಡದ ಪೈಪೋಟಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಜಿದ್ದಾಜಿದ್ದಿ ನಡೆಸಿವೆ. ಆದರೆ, ಭಾರತಕ್ಕೆ ಈ ಆವೃತ್ತಿಯಲ್ಲಿ ಉಳಿದಿರುವುದು ಏಕೈಕ ಟೆಸ್ಟ್ ಮಾತ್ರ. ಆದರೆ ಆಸ್ಟ್ರೇಲಿಯಾಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ.
ಸಿಡ್ನಿ ಟೆಸ್ಟ್ ನಲ್ಲಿ ಭಾರತ ತಂಡವು ಗೆದ್ದರೆ ಪಿಸಿಟಿಯು 55.26ಕ್ಕೇರುತ್ತದೆ. ಆಸ್ಟ್ರೇಲಿಯಾ 57.84ಕ್ಕೆ ಇಳಿಯುತ್ತದೆ. ಆಗ ಶ್ರೀಲಂಕಾ ದಲ್ಲಿ ನಡೆಯುವ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾದ ಸೋಲು ಗೆಲುವಿನ ನಂತರ ಭಾರತದ ಹಣೆಬರಹ ಸ್ಪಷ್ಟವಾಗಲಿದೆ.
ಈ ಸರಣಿಯಲ್ಲಿ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ತಂಡವು ಒಂದು ಜಯ ಹಾಗೂ ಒಂದು ಡ್ರಾ ಅಥವಾ ಎರಡು ಪಂದ್ಯಗಳಲ್ಲೂ ಗೆಲುವು ದಾಖಲಿಸಿದರೆ ಟೀಮ್ ಇಂಡಿಯಾ ಫೈನಲ್ ಗೇರುವುದು ಖಚಿತ. ಅಂದರೆ ಆಸ್ಟ್ರೇಲಿಯಾ ವಿರುದ್ದ ಶ್ರೀಲಂಕಾ 1-0 ಅಥವಾ 2-0 ಅಂತರದಿಂದ ಸರಣಿ ಗೆದ್ದರೆ, ಆಸ್ಟ್ರೇಲಿಯಾ ತಂಡದ ಅಂಕ 53.50ಕ್ಕೆ ಕುಸಿಯಲಿದೆ. ಇತ್ತ 55.26 ಅಂಕಗಳನ್ನು ಹೊಂದಿರುವ ಟೀಮ್ ಇಂಡಿಯಾ ಫೈನಲ್ ಗೆ ಅರ್ಹತೆ ಪಡೆಯಲಿದೆ.
ಹೀಗಾಗಿ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಭವಿಷ್ಯ ಶ್ರೀಲಂಕಾ ತಂಡದ ಕೈಯಲ್ಲಿದೆ ಎನ್ನಬಹುದು. ಆದರೆ ಅದಕ್ಕೂ ಮುನ್ನ ಭಾರತ ತಂಡವು ಸಿಡ್ನಿ ಟೆಸ್ಟ್ ನಲ್ಲಿ ಗೆಲ್ಲಲಿದೆಯಾ ಕಾದು ನೋಡಬೇಕಿದೆ.