ಪೋಷಕರ ಕಣ್ಣೆದುರಿನಲ್ಲೇ ಮಗುವಿಗೆ ಬಡಿದ ಟ್ಯಾಂಕರ್: ಉಳ್ಳಾಲದ ಸಿಸಿಟಿವಿಯಲ್ಲಿ ಸೆರೆಯಾಯ್ತು ಅಪಘಾತದ ಭೀಕರ ದೃಶ್ಯಾವಳಿ..!
ಮಂಗಳೂರು : ಮಂಗಳೂರು ನಗರದ ಹೊರವಲಯದ ಉಳ್ಳಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಪೋಷಕರ ನಿರ್ಲಕ್ಷ್ಯಕ್ಕೆ ಪುಟ್ಟ ಮಗುವೊಂದು ರಸ್ತೆ ದುರಂತಕ್ಕೆ ಒಳಗಾಗಿದ್ದು, ಗಂಭೀರಾವಸ್ಥೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ತೊಕ್ಕೊಟ್ಟು ಸಮೀಪದ ಉಳ್ಳಾಲಬೈಲ್ ಹೆದ್ದಾರಿ 66 ರಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಹಾಗೂ ಉಳ್ಳಾಲಬೈಲ್ ಪ್ರದೇಶದಲ್ಲಿ ವಾಸವಾಗಿರುವ ಕುಟುಂಬದ ನಾಲ್ಕು ವರ್ಷದ ಕೃಷ್ಣ ಎಂಬ ಮಗು ಗಂಭೀರ ಸ್ಥಿತಿಯಲ್ಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಸಂಜೆ 6.30ಕ್ಕೆ ಈ ಘಟನೆ ನಡೆದಿದೆ. ಉಳ್ಳಾಲ ಬೈಲ್‌ನಲ್ಲಿ ಸಂಜೆ ತಾಯಿ ಮಕ್ಕಳು ರಸ್ತೆ ದಾಟಲು ಸಿದ್ಧತೆ ನಡೆಸಿದ್ದರು.
ಈ ವೇಳೆ ತೊಕ್ಕೊಟ್ಟಿನಿಂದ ಉಳ್ಳಾಲ ಕಡೆಗೆ ಹೋಗುತ್ತಿದ್ದ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದು ಮಗುವಿನ ಮೇಲೆ ಹರಿದಿದೆ.
ರಸ್ತೆ ದಾಟಲೆಂದು ನಿಂತಿದ್ದ ಕೃಷ್ಣ ಪೊಷಕರ ಕೈಯಿಂದ ತಪ್ಪಿಸಿ ಮುಂದೆ ಓಡಿದ್ದು, ಇದು ಪೋಷಕರ ನಿರ್ಲಕ್ಷ್ಯದಿಂದಲೇ ನಡೆದ ಅಪಘಾತ ಎನ್ನುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
ಅಪಘಾತಕ್ಕೆ ಒಳಗಾಗಿರುವ ಗಾಯಾಳುವಿನ ಎರಡೂ ಕಾಲುಗಳು ಜಖಂಗೊಂಡಿವೆ. ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದ್ದು, ಮಂಗಳೂರು ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ..