ಇತ್ತೀಚೆಗೆ ರಿಲೀಸ್ ಆದ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. ಈ ಚಿತ್ರಗಳಿಗೆ ಕೆಟ್ಟ ವಿಮರ್ಶೆ ಸಿಕ್ಕವು. ‘ಕಂಗುವ’ ಸಿನಿಮಾ ನೋಡಿ ಬಂದ ಎಲ್ಲರೂ ಸಾಕಷ್ಟು ಟೀಕೆ ವ್ಯಕ್ತಪಡಿಸಿದರು. ಸಿನಿಮಾ ನೋಡುತ್ತೇನೆ ಎಂದು ಹೊರಡಬೇಕು ಎಂದುಕೊಂಡಿದ್ದವರಿಗೆ ಈ ವಿಮರ್ಶೆಯಿಂದ ಹಿನ್ನಡೆ ಆಯಿತು. ಇದನ್ನು ಗಮನದಲ್ಲಿ ಇಟ್ಟುಕೊಂಡು ತಮಿಳುನಾಡು ನಿರ್ಮಾಪಕರ ಸಂಘ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ.
ಇತ್ತೀಚೆಗೆ ಯೂಟ್ಯೂಬರ್ಗಳ ಸಂಖ್ಯೆ ಹೆಚ್ಚಿದೆ. ಎಲ್ಲರೂ ಯೂಟ್ಯೂಬ್ ಮಾಡಿಕೊಂಡು, ಸಿನಿಮಾ ವಿಮರ್ಶೆ ಮಾಡುತ್ತಿದ್ದಾರೆ. ಇದರ ಜೊತೆಗೆ ಮೈಕ್ ಹಿಡಿದು ಥಿಯೇಟರ್ನಿಂದ ಹೊರ ಬರುವ ಪ್ರೇಕ್ಷಕರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಪ್ರೇಕ್ಷಕರು ತಮಗೆ ಅನಿಸಿದ್ದನ್ನು ಹೇಳುತ್ತಾರೆ. ಇದು ಸಿನಿಮಾ ಕಲೆಕ್ಷನ್ ಮೇಲೆ ಪ್ರಭಾವ ಬೀರುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ವಿಮರ್ಶೆ ಎಂದರೆ ಸಿನಿಮಾ ಬಗ್ಗೆ ಸಂಪೂರ್ಣ ವಿವರ ಇರಬೇಕು. ಆದರೆ, ಇಲ್ಲಿ ಆ ರೀತಿ ಆಗುವುದಿಲ್ಲ. ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದಷ್ಟೇ ಹೇಳಲಾಗುತ್ತದೆ. ಈ ರೀತಿಯ ವಿಮರ್ಶೆಗಳಿಂದಲೇ ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಸಿನಿಮಾ ಹಿನ್ನಡೆ ಅನುಭವಿಸಿತು ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ. ಈ ಕಾರಣಕ್ಕೆ ತಮಿಳು ನಿರ್ಮಾಪಕರ ಸಂಘದವರು ಥಿಯೇಟರ್ ಮುಂಭಾಗದಲ್ಲಿ ಸಿನಿಮಾ ವಿಮರ್ಶೆ ಮಾಡೋದನ್ನು ಬ್ಯಾನ್ ಮಾಡಿದ್ದಾರೆ. ಇದರ ಪ್ರಕಾರ ಯಾರೂ ಥಿಯೇಟರ್ ಬಳಿ ಮೈಕ್ ಹಿಡಿದು ಬರುವಂತಿಲ್ಲ.
‘ಈ ರೀತಿಯ ವಿಮರ್ಶೆಗಳು ಸಿನಿಮಾಗೆ ತೊಂದರೆ ಮಾಡುತ್ತವೆ. ಈ ಕಾರಣಕ್ಕೆ ಬ್ಯಾನ್ ಮಾಡಲಾಗಿದೆ’ ಎನ್ನುವ ಅಭಿಪ್ರಾಯವನ್ನು ನಿರ್ಮಾಪಕರ ಕೌನ್ಸಿಲ್ ನೀಡಿದೆ. ಇದಕ್ಕೆ ಯೂಟ್ಯೂಬರ್ಗಳು ವಿರೋಧ ಹೊರಹಾಕಿದ್ದಾರೆ.
‘ಪ್ರೇಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇದನ್ನು ನಾವು ಜನರಿಗೆ ತಲುಪಿಸುತ್ತೇವೆ. ಇದರಲ್ಲಿ ತಪ್ಪೇನಿದೆ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ‘ಕಂಗುವ’ ಹಾಗೂ ‘ವೆಟ್ಟೈಯಾನ್’ ಈ ರೀತಿಯ ವಿಮರ್ಶೆಗಳಿಂದಲೇ ಸೋತಿತು ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಈ ಸಿನಿಮಾಗಳು ಉತ್ತಮವಾಗಿರಲಿಲ್ಲ ಎಂಬ ಕಾರಣಕ್ಕೆ ಸೋತಿವೆ ಎಂದು ಅನೇಕರು ಹೇಳಿಕೊಂಡಿದ್ದಾರೆ.
ಸೂರ್ಯ ನಟನೆಯ ‘ಕಂಗುವ’ ಸಿನಿಮಾಗೆ ಶಿವ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಬಿ ಡಿಯೋಲ್, ದಿಶಾ ಪಟಾಣಿ ಮೊದಲಾದವರು ನಟಿಸಿದ್ದಾರೆ. ಜ್ಞಾನವೇಲ್ ರಾಜಾ ಇದನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ರಜನಿಕಾಂತ್ ‘ವೆಟ್ಟೈಯಾನ್’ ಸಿನಿಮಾದಲ್ಲಿ ನಟಿಸಿದ್ದಾರೆ.
Pingback: ಆಶ್ರಮದ ಸ್ವಾಮಿಜಿಗೆ ಮೆಣಸಿನ ಪುಡಿಯಿಂದ ಅಭಿಷೇಕ; ಏನಿದು ಸುದ್ಧಿ !? - NAMMAKUDLA NEWS - ನಮ್ಮಕುಡ್ಲ ನ್ಯೂಸ್