ಉಪ್ಪಿನಂಗಡಿ: ನಿನ್ನೆ ರಾತ್ರಿ ತಂಡವೊಂದು ಐವರ ಮೇಲೆ ತಲವಾರು ಹಾಗೂ ರಾಡ್‌ನಿಂದ ಹಲ್ಲೆ ನಡೆಸಿದ ಘಟನೆಯ ಕುರಿತಾಗಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ದೂರು ನೀಡಿರುವ ಮುಹಮ್ಮದ್ ಫಯಾಝ್ ಎಂಬವರು ತಾನು ಭಾನುವಾರ ಸಂಜೆ 7.30ರ ವೇಳೆಗೆ ಅಂಡೆತ್ತಡ್ಕದಲ್ಲಿರುವ ಮಂಜುಶ್ರೀ ಸ್ಟೋರ್‌ಗೆ ತನ್ನ ಸ್ನೇಹಿತ ಅಫೀಝ್‌ನೊಂದಿಗೆ ದಿನಸಿ ಖರೀದಿ ಮಾಡಲು ತೆರಳಿದ್ದು,
ಅಲ್ಲಿಗೆ ಬಂದ ಆರೋಪಿಗಳಾದ ಜಯರಾಮ್, ಸಂದೀಪ್, ನವೀನ್, ಕಾರ್ತಿಕ್, ಸುಮಂತ್ ಶೆಟ್ಟಿ, ಪ್ರೀತಮ್, ಲತೇಶ್ ನೂಜಿ ಎಂಬವರು ಕೈಯಲ್ಲಿ ರಾಡ್‌ಗಳನ್ನು ಹಿಡಿದುಕೊಂಡು ಬಂದು ನಮಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ರಾಡ್‌ನಿಂದ ಹಲ್ಲೆ ನಡೆಸಿದ್ದಲ್ಲದೆ,
ನಾವು ತಪ್ಪಿಸಿಕೊಂಡು ಓಡಿ ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ನಮ್ಮನ್ನು ಅಟ್ಟಾಡಿಸಿಕೊಂಡು ಬಂದಿದ್ದಾರೆ.
ಈ ಸಂದರ್ಭ ಆರೋಪಿ ಜಯರಾಮ ಎಂಬಾತ ನನ್ನನ್ನು ದೂಡಿ ಹಾಕಿದ್ದರಿಂದ ನನ್ನ ಎರಡೂ ಕಾಲಿನ ಮೊಣಗಂಟಿಗೆ ಹಾಗೂ ಕೈಗೆ ಗಾಯವುಂಟಾಗಿದೆ.
ಅಲ್ಲದೆ, ನನ್ನ ಕಿಸೆಯಲ್ಲಿದ್ದ ಮೊಬೈಲ್ ಫೋನ್ ಜಖಂಗೊಂಡು ಎಂಟು ಸಾವಿರ ರೂ. ನಷ್ಟವುಂಟಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಇನ್ನೊಂದು ಪ್ರತ್ಯೇಕ ದೂರು ದಾಖಲಿಸಿರುವ ಅಬ್ದುಲ್ ಝಕಾರಿಯಾ ಎಂಬವರು ಭಾನುವಾರ ರಾತ್ರಿ ಸುಮಾರು 8 ಗಂಟೆಗೆ ತಾನು ಹಾಗೂ ಸಿದ್ದೀಕ್ ಅವರೊಂದಿಗೆ ಇಕ್ಬಾಲ್ ಜಿ.
ಅವರ ದಿನಸಿ ಅಂಗಡಿಯ ಬಳಿ ಇರುವಾಗ ಆರೋಪಿಗಳಾದ ಜಯರಾಮ, ಸಂದೀಪ್, ಸುಪ್ರೀತ್, ಪ್ರೀತಮ್, ಲತೇಶ್ ಹಾಗೂ 30 ಜನ ದ್ವಿಚಕ್ರ ವಾಹನ ಸವಾರರು ಅಲ್ಲಿಗೆ ಕೈಯಲ್ಲಿ ತಲವಾರು, ರಾಡ್‌ಗಳನ್ನು ಹಿಡಿದುಕೊಂಡು ಬಂದಿದ್ದು,
ಇವರಲ್ಲಿ ಆರೋಪಿ ಸಂದೀಪ್ ಕುಪ್ಪೆಟ್ಟಿ ಎಂಬಾತನು ಬೈಕ್ನಲ್ಲಿ ಸಹಸವಾರನಾಗಿದ್ದ ಆರೋಪಿ ಜಯರಾಮ ಎಂಬಾತನನಲ್ಲಿ ಸಿದ್ದೀಕ್‌ನನ್ನು ತೋರಿಸಿ ಇವನಾ? ಎಂದು ಕೇಳಿದ್ದು,
ಆಗ ಆತ ಇವನಲ್ಲ ಎಂದು ಹೇಳಿದಾಗ ಸಿದ್ದೀಕ್‌ಗೆ ತಲವಾರಿನಿಂದ ಕೈಗೆ, ಬೆನ್ನಿಗೆ ಆರೋಪಿಗಳು ಕಡಿದಿದ್ದಾರೆ.
ಆಗ ಇತರರು ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಆ ಸಂದರ್ಭ ಅವರ ತಂಡದ ಒಬ್ಬಾತ ನನ್ನನ್ನು ಹಿಡಿದುಕೊಂಡಿದ್ದು, ಜಯರಾಮನು ತನ್ನ ತಲೆಯ ಹಿಂಭಾಗಕ್ಕೆ ಕಡಿದಾಗ, ಸಂದೀಪ್ ಎಂಬಾತ ತನಗೆ ರಾಡ್‌ನಿಂದ ಕೈಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ,
ಕೊಲೆಗೆ ಯತ್ನಿಸಲಾಗಿದೆ. ಈ ಸಂದರ್ಭ ನಾನು ಹಾಗೂ ಸಿದ್ದೀಕ್ ಅವರಿಂದ ತಪ್ಪಿಸಿಕೊಂಡು ಓಡಿಹೋಗುತ್ತಿದ್ದಾಗ ನಮ್ಮನ್ನು ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಹಿಂಬಾಲಿಸಿಕೊಂಡು ಬಂದಿದ್ದು,
ಆಗ ದಾರಿಯಲ್ಲಿ ನಡೆದುಕೊಂಡು ಬರುತ್ತಿದ್ದ ಅಯೂಬ್ ಖಾನ್‌ರ ತಲೆಯ ಭಾಗಕ್ಕೂ ಆರೋಪಿ ಜಯರಾಮ ಕಡಿದು, ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಆಸುಪಾಸಿನ ಜನರು ಸೇರುವುದನ್ನು ಕಂಡು ಆರೋಪಿಗಳು ಪರಾರಿಯಾದರು ಎಂದು ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ಅಯೂಬ್ ಖಾನ್ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಬ್ದುಲ್ ಝಕಾರಿಯಾ ಹಾಗೂ ಸಿದ್ದೀಕ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಧರ್ಮಸ್ಥಳ : 53 ನೇ ವರ್ಷದ ಉಚಿತ ಸಾಮೂಹಿಕ ವಿವಾಹವು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ.3 ರ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನದಲ್ಲಿ ನಡೆಯಲಿದೆ.
‘ಮದುವೆ’ ಎನ್ನುವುದು ಅದೆಷ್ಟೋ ಜನರ ಸುಂದರ ಕನಸು. ಆದರೆ ಆರ್ಥಿಕ ಪರಿಸ್ಥಿತಿಯು ಆ ಖುಷಿಗೆ ಸಾಥ್ ನೀಡದೆ ಇರಬಹುದು. ಕೆಲವೊಮ್ಮೆ ಜೋಡಿಯ ಪವಿತ್ರ ಪ್ರೇಮಕ್ಕೆ ಕುಟುಂಬವೂ ಅಡ್ಡಿಯಾಗಬಹುದು. ಅಂತಹ ಯುವ ಜೋಡಿಗೆ ಸಿಹಿ ಸುದ್ದಿಯೊಂದು ಬಂದಿದ್ದು, ಶ್ರೀ ಕ್ಷೇತ್ರ ದರ್ಮಸ್ಥಳದಲ್ಲುಇ ನಡೆಯುವ ಸಾಮೂಹಿಕ ವಿವಾಹದ ಸದುಪಯೊಗವನ್ನು ಪಡೆದುಕೊಳ್ಳಬಹುದು.
ಎರಡನೇ ವಿವಾಹಕ್ಕೆ ನಿರ್ಬಂಧ ಹೇರಿದ್ದು, ಮೊದಲ ಮದುವೆಗೆ ಮಾತ್ರ ಆದ್ಯತೆ ನೀಡಲಾಗುವುದು. ಮಧುಮಗನಿಗೆ ಧೋತಿ, ಶಾಲು ನೀಡಲಾಗುವುದು. ಮಧುಮಗಳಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ ಹೂವಿನ ಹಾರ ಕೊಡಲಾಗುವುದು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯ ಮೂಲಕವೇ ಮದುವೆಯ ಎಲ್ಲಾ ವೆಚ್ಚವನ್ನು ಮಾಡಲಾಗುವುದು. ಆಸಕ್ತರು 2025 ಫೆ.25 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 08256-266644 ಸಂಖ್ಯೆಯನ್ನು ಸಂಪರ್ಕಿಸಬಹುದು.
ಮಂಗಳೂರು : ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ … ಹೀಗಂತ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ.
ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸುವ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ.
ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು.
ಆದರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಎಂದು ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.
ಮಂಗಳೂರು : ಇಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಡಾಲಿ ಚಾಯ್ ವಾಲ ಅವರನ್ನು ಅದ್ದೂರಿಯಾಗಿ ಸ್ವಾಗತ ಕೊರಲಾಯಿತು.
ಮಂಗಳೂರಿನಲ್ಲಿ ಜನವರಿ 18 ರಿಂದ 22 ರ ವರೆಗೆ ಐದು ದಿನಗಳ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟದಲ್ಲಿ ಈ ಬಾರಿ ಮಹಾರಾಷ್ಟ್ರದ ನಾಗ್ಪುರದ ಖ್ಯಾತ ಡಾಲಿ ಚಾಯ್‌ವಾಲ ಅವರು ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಕಾರ್ಯಕ್ರಮದ ಮೊದಲ ದಿನ ಅವರು ಭಾಗವಹಿಸಲಿದ್ದಾರೆ. ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಿಲ್ಲಾಡಳಿತದ ಸಹಕಾರದಲ್ಲಿ ಈ ಐದು ದಿನಗಳ ಮಂಗಳೂರು ಸ್ಟ್ರೀಟ್ ಫುಡ್ ಫಿಯೆಸ್ಟ ಹಮ್ಮಿಕೊಳ್ಳಲಾಗಿದೆ.
ತನ್ನ ಮಂಗಳೂರು ಭೇಟಿಯ ಕುರಿತು ಡಾಲಿ ಚಾಯ್‌ವಾಲ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿದ್ದು, ‘ಜ. 18ರಂದು ಮಂಗಳೂರಿನಲ್ಲಿ ಸಿಗುತ್ತೇನೆ. ಮಜಾ ಕರೇಂಗೆ .. ಚಾಯ್ ಪಿಯೇಂಗೆ’ ಎಂದು ಪೋಸ್ಟ್ ಹಾಕಿದ್ದರು.
ಮೈಕ್ರೋಸಾಪ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಡಾಲಿ ಅವರ ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿದು ಪೋಸ್ಟ್ ಹಂಚಿ ಕೊಂಡ ಬಳಿಕ ಡಾಲಿ ಚಾಯ್‌ವಾಲ ಅವರು ದೇಶಾದ್ಯಂತ ಪರಿಚಿತರಾಗಿದ್ದಾರೆ. ಅವರ ಮೂಲ ಹೆಸರು ಸುನಿಲ್ ಪಾಟೀಲ್. ಆದರೆ ಅವರು ಡಾಲಿ ಚಾಯ್‌ವಾಲ ಎಂದೇ ಪ್ರಸಿದ್ಧರಾಗಿದ್ದಾರೆ.