ಉಡುಪಿ: ಸುರತ್ಕಲ್ ಟೋಲ್ ಗೇಟ್ ತೆರವು ಕುರಿತು ಈಗಾಗಲೇ ಸುದೀರ್ಘ ಚರ್ಚೆ ನಡೆಸಲಾಗಿದೆ. ಟೋಲ್ ಗೇಟ್ ತೆರವು ಕಾರ್ಯ ಅಂತಿಮ ಹಂತದಲ್ಲಿದ್ದು, ನವೆಂಬರ್ ತಿಂಗಳಾಂತ್ಯಕ್ಕೆ ಟೋಲ್‌ಗೇಟ್ ತೆರವು ಮಾಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅಕ್ಟೋಬರ್ 18ರಂದು ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಟೋಲ್‌ಗೇಟ್ ತೆರವಿಗೆ ಭಾರೀ ಪ್ರತಿಭಟನೆ ನಡೆಸಿದ್ದರು.
ಅದಕ್ಕೂ ಮುನ್ನ ಪ್ರತಿಭಟನಾಕಾರರು ಈ ಹೋರಾಟವನ್ನು ಕೈಬಿಡಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದರು.
ಟೋಲ್‌ಗೇಟ್ ತೆರವಿಗೆ ಇನ್ನೂ 20 ದಿನಗಳ ಕಾಲಾವಕಾಶ ಕೊಡೋಣ ಎಂದು ಹೇಳಿದ್ದರು. ಆದರೆ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ ಸುನಿಲ್ ಕುಮಾರ್ ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.
ಇಂದು ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು, ಸುರತ್ಕಲ್ ಟೋಲ್ ಗೇಟ್ ತೆರವು ಕುರಿತು ಈಗಾಗಲೇ ಸುದೀರ್ಘ ಚರ್ಚೆ ನಡೆಸಲಾಗಿದೆ.
ನನಗಿರುವ ಮಾಹಿತಿ ಪ್ರಕಾರ ನವೆಂಬರ್ ಅಂತ್ಯಕ್ಕೆ ತೆರವಾಗಲಿದೆ ಎಂದು ಹೇಳಿದ್ದಾರೆ. ಇವರ ಹೇಳಿಕೆಗೂ, ಸಂಸದರ ಹೇಳಿಕೆಗೂ ಅಜಗಜಾಂತವಿರುವುದು ಜನಪ್ರತಿನಿಧಿಗಳ ಒಳಗೇ ಸಮನ್ವಯತೆ, ಮಾಹಿತಿ ಕೊರತೆ ಇರುವುದು ಕಾಡುತ್ತಿದೆ.
20 ದಿನಗಳ ಕಾಲಾವಕಾಶದ ಹೊರತೂ ಟೋಲ್‌ಗೇಟ್ ತೆರವು ಮಾಡಲು ಹೆದ್ದಾರಿ ಪ್ರಾಧಿಕಾರ ಮುಂದಾಗದೇ ಇದ್ದಲ್ಲಿ ತಾನೇ ಖುದ್ದಾಗಿ ಪ್ರತಿಭಟನೆಗೆ ಇಳಿಯುವುದಾಗಿ ನಳಿನ್ ಹೇಳಿದ್ದರು.
ಮಾಜಿ ಕಾರ್ಪೋರೇಟರ್ , ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ವಿರುದ್ದ ಅಶ್ಲೀಲ ಟ್ರೋಲ್ ಕುರಿತು ಕೇಳಲಾದ ಪ್ರಶ್ನೆಗೆ ಸಚಿವರು, ‘ನೋ ಕಮೆಂಟ್ಸ್’ ಎಂದು ನುಣುಚಿಕೊಂಡರು.