ಅಕ್ಟೋಬರ್ 18 ರಂದು ಸುರತ್ಕಲ್ ಟೋಲ್ ತೆರವುಗೊಳಿಸುವ ಉಗ್ರ ಹೋರಾಟಕ್ಕೆ ಹೋರಾಟ ಸಮಿತಿ ಕರೆಕೊಟ್ಟಿದ್ದು, ಬಿಜೆಪಿಯೇತರ ಎಲ್ಲಾ ವಿಪಕ್ಷಗಳು ಇದಕ್ಕೆ ಬೆಂಬಲ ನೀಡಿದ್ದವು.
ಈ ಟೋಲ್ ವಿಚಾರವೂ ವಿಧಾನಸೌಧದಲ್ಲೂ ಸದ್ದು ಮಾಡಿದ್ದು, ಆಡಳಿತ ಪಕ್ಷಕ್ಕೆ ತಲೆನೋವು ಉಂಟು ಮಾಡಿತ್ತು. ಆದ್ದರಿಂದ ಜಿಲ್ಲಾಡಳಿತ ಮೂಲಕ ಹೋರಾಟವನ್ನು ಕೈಬಿಡುವಂತೆ ಹೋರಾಟ ಸಮಿತಿಯೊಂದಿಗೆ ಅಣೇಕ ಸಭೆಗಳನ್ನು ನಡೆಸಿದ ಜಿಲ್ಲಾಡಳಿತ ಮನವಿಯನ್ನೂ ಮಾಡಿತ್ತು.
ಆದರೆ ಅದಕ್ಕೆ ಮಣಿಯದ 100 ಕ್ಕೂ ಅಧಿಕ ಪ್ರಮುಖ ಹೋರಾಟಗಾರರ ಮನೆ ಮೇಲೆ ಪೊಲೀಸರು ತಡರಾತ್ರಿ ದಾಳಿ ಮಾಡಿದ್ದು, ಹೋರಾಟಗಾರರು 2 ಲಕ್ಷದ ಬಾಂಡ್ ಮತ್ತು ಸರ್ಕಾರಿ ಜಾಮೀನಿನೊಂದಿಗೆ ಇಂದು ಬೆಳಗ್ಗೆ ಪೊಲೀಸ್ ಕಮೀಷನರ್ ಕಛೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ಟೋಲ್ ತೆರವು ಮಾಡುವ ಭರವಸೆಯನ್ನು ಆಡಳಿತ ಪಕ್ಷ ನೀಡುತ್ತಾ ಬಂದಿದ್ದರೂ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ.
ಆದ್ದರಿಂದ ಅ. 18 ರಂದು ಟೋಲ್ ಗೆ ಮುತ್ತಿಗೆ ಹಾಕಲು ಹೋರಾಟ ಸಮಿತಿ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಖಾಕಿ ಪಡೆಯ ಮೂಲಕ ಬಗ್ಗುಬಡಿಯಲು ಮುಂದಾದ ಸರ್ಕಾರ ಮಧ್ಯರಾತ್ರಿ ಪೊಲೀಸರಿಂದ ಮನೆಗೆ ದಾಳಿ ಮಾಡಿಸಿದೆ.
ಮಹಿಳಾ ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೂ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಿವೈಎಫ್ ಐ ರಾಜ್ಯಾಧ್ಯಕ್ಷ ಹಾಹೂ ಟೋಲ್ ಹೋರಾಟ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ , ಪೊಲೀಸರ ಬೆದರಿಕೆಗೆ ನಾವು ಅಂಜುವುದಿಲ್ಲ, ತುಳುನಾಡ ಜನರು ಎಚ್ಚೆತ್ತುಕೊಂಡಿದ್ದಾರೆ, ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾಸತ್ತಾತ್ಮಕ ಟೋಲ್ ಹೋರಾಟಗಾರರ ವಿರುದ್ಧ ಪೊಲೀಸ್ ದಬ್ಬಾಳಿಕೆ: ಮುಸ್ಲಿಮ್ ಒಕ್ಕೂಟ ಖಂಡನೆ .
ಜಿಲ್ಲೆಯ ಜನರು ಸಮಾನ ಮನಸ್ಕ ಸಂಘಟನೆಯ ಆಶ್ರಯದಲ್ಲಿ ಅಕ್ತೋಬರ್ 18 ರಂದು ಸುರತ್ಕಲ್ ಟೋಲ್ ಮುತ್ತಿಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಕೇಂದ್ರ ಮತ್ತು ರಾಜ್ಯ ಸರಕಾರ ಜನರು ನಡೆಸುತ್ತಿರುವ ಪ್ರಜಾ ಸತ್ತಾತ್ಮಕ ಹೋರಾಟವನ್ನು ಹತ್ತಿಕ್ಕಲು ಪೊಲೀಸು ದಬ್ಬಾಳಿಕೆಯನ್ನು ಬಳಸುತ್ತಿದೆ.
ಸಂಭಾವ್ಯ ಹೋರಾಟಗಾರರ ಮನೆಗಳಿಗೆ ಮಧ್ಯರಾತ್ರಿ ಬಲವಂತವಾಗಿ ನುಗ್ಗಿ ಪೊಲೀಸು ನೋಟೀಸು ನೀಡಲಾಗುತ್ತಿದ್ದು.ಸರಕಾರದ ಮತ್ತು ಪೊಲೀಸರ ಇಂತಹ ನಡೆ ತೀವ್ರ ಖಂಡನೀಯ.
ಪ್ರಜಾಪ್ರಭುತ್ವ ಆಡಳಿತದಲ್ಲಿ ಅನ್ಯಾಯದ ವಿರುದ್ಧ ದ್ವನಿ ಎತ್ತುವ ಸಾಮೂಹಿಕ ಜನ ವರ್ಗವನ್ನು ಪೊಲೀಸು ಒತ್ತಡ ಮೂಲಕ ಹತ್ತಿಕ್ಕುವ ಸರಕಾರದ ಯಾವುದೇ ನಡೆ ಫಲಕಾರಿಯಾಗುವುದಿಲ್ಲ.ಹಾಲಿ ಸರಕಾರ ಜನ ಆಕ್ರೋಶ ವನ್ನು ಎದುರಿಸಬೇಕಾಗುತ್ತದೆ ಎಂದು
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಎಚ್ಚರಿಕೆ ನೀಡಿದ್ದಾರೆ.