ಮಂಗಳೂರು: ಸುರತ್ಕಲ್‌ನ ಟೋಲ್ ಗೇಟ್ ರದ್ದಾಗಿದೆ ಎಂಬುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ ಒಂದು ವಾರ ಕಳೆದರೂ ಟೋಲ್ ಕೇಂದ್ರದಲ್ಲಿ ಟೋಲ್ ಶುಲ್ಕ ಸಂಗ್ರಹ ನಿಲ್ಲಿಸದಿರುವುದನ್ನು ಖಂಡಿಸಿ ಇಂದು ಟೋಲ್ ಗೇಟ್ ನ ಹಗಲು-ರಾತ್ರಿ ಧರಣಿ ವೇದಿಕೆಯಲ್ಲಿ ನಳಿನ್ ಅವರ ಟ್ವೀಟ್ ನ ಅನಾವರಣ ನಡೆಯಿತು.
ಮಾಜಿ ಸಚಿವ ಅಭಯ ಚಂದ್ರ ಜೈನ್ ಇದನ್ನು ಅನಾವರಣ ಮಾಡಿದರು. ಈ ಸಂದರ್ಭದಲ್ಲಿ ಟೋಲ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ನಳಿನ್ ಕುಮಾರ್ ಕಟೀಲ್ ವಿರುದ್ಧ ಘೋಷಣೆ ಹೇಳಿ ಧಿಕ್ಕಾರ ಕೂಗಿದರು.
ಕಾಂಗ್ರೆಸ್ ಮುಖಂಡ ಕಾವು ಹೇಮನಾಥ ಶೆಟ್ಟಿ, ಮಾಜಿ ಮೇಯರ್ ಅಶ್ರಫ್, ಮುಖಂಡರಾದ ಬಿ ಕೆ ಇಮ್ತಿಯಾಜ್, ಶಾಲೆಟ್ ಪಿಂಟೊ, ಮಾಜಿ ಉಪಮೇಯರ್ ಬಶೀರ್ ಬೈಕಂಪಾಡಿ, ಮುಹಮ್ಮದ್ ಕುಂಜತ್ತಬೈಲ್, ಪುರುಷೋತ್ತಮ ಚಿತ್ರಾಪುರ, ಮಾನಸ ಉರ್ವ, ಪ್ರಮೀಳಾ, ಅಶ್ರಫ್ ಕಲ್ಲೇಗ, ಮಂಜುಳಾ ನಾಯಕ್, ವೈ ರಾಘವೇಂದ್ರರಾವ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ನವೆಂಬರ್ 14 ರಂದು ನಳಿನ್ ಅವರು ‘ಮಂಗಳೂರಿನ ಸುರತ್ಕಲ್ ಸಮೀಪದ ಟೋಲ್ ಸಂಗ್ರಹ ಕೇಂದ್ರ ರದ್ದಾಗಿದ್ದು, ನಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಗರಿಕರ ಪರವಾಗಿ ಧನ್ಯವಾದಗಳು.
ಟೋಲ್ ರದ್ದು ಮಾಡುವ ಭರವಸೆಯನ್ನು ಈ ಮೊದಲೇ ಕೇಂದ್ರ ಸಚಿವರು ನೀಡಿದ್ದು, ಈಗ ತಾಂತ್ರಿಕ ಅಂಶ ಪೂರೈಸಲಾಗಿದೆ’ ಎಂದು ಟ್ಟೀಟ್ ಮಾಡಿದ್ದರು.