ಮಂಗಳೂರು/ನವದೆಹಲಿ : ಸೈಬರ್ ವಂಚನೆ ಪ್ರಕರಣದಲ್ಲಿ ಗ್ರಾಹಕನಿಗೆ ನಷ್ಟ ಸಂಭವಿಸಿದ್ರೆ ಅದಕ್ಕೆ ಬ್ಯಾಂಕುಗಳೇ ಹೊಣೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಬ್ಯಾಂಕುಗಳಲ್ಲಿ ಗ್ರಾಹಕನ ಖಾತೆಯಲ್ಲಿ ಯಾವುದೇ ಅನಧಿಕೃತ ವಹಿವಾಟು ನಡೆದು ನಷ್ಟ ಸಂಭವಿಸಿದರೆ ಅದಕ್ಕೆ ಬ್ಯಾಂಕುಗಳೇ ನೇರವಾಗಿ ಹೊಣೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಅಸ್ಸಾಂನ ಸೈಬರ್ ವಂಚನೆಗೆ ಒಳಗಾದ ಪಲ್ಲಭ್ ಭೌಮಿಕ್ ಅವರಿಗೆ 94,000 ರೂ. ಗಳನ್ನು ಮರುಪಾವತಿಸುವಂತೆ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಹೊರಡಿಸಿದೆ.
ಈ ಪ್ರಕರಣವು ಬ್ಯಾಂಕುಗಳು ತಮ್ಮ ಗ್ರಾಹಕರ ಹಣವನ್ನು ವಂಚನೆಯ ಚಟುವಟಿಕೆಗಳಿಂದ ರಕ್ಷಿಸುವಲ್ಲಿ ಹಣಕಾಸು ಸಂಸ್ಥೆಗಳ ಜವಾಬ್ದಾರಿಗಳನ್ನು ತೀವ್ರವಾಗಿ ಎತ್ತಿ ತೋರಿಸಿದೆ.
ಪ್ರಕರಣದ ಹಿನ್ನೆಲೆ
ಪಲ್ಲಭ್ ಭೌಮಿಕ್ ಎನ್ನುವವರು ಆನ್ ಲೈನ್ ನಲ್ಲಿ ವಸ್ತುವೊಂದನ್ನು ಖರೀದಿಸಿದ್ದರು. 4,000 ರೂ. ಮೌಲ್ಯದ ಲೂಯಿಸ್ ಫಿಲಿಪ್ ಬ್ಲೇಜರ್ ಅನ್ನು ಹಿಂದಿರುಗಿಸಲು ಪ್ರಯತ್ನಿಸಿದಾಗ ಸೈಬರ್ ವಂಚನೆ ಸಂಭವಿಸಿದೆ. ಗ್ರಾಹಕ ಸೇವಾ ಪ್ರತಿನಿಧಿಯಾಗಿ ನಟಿಸಿ, ವಂಚಕರು ಪಲ್ಲಭ್ ಅವರನ್ನು ದುರುದ್ದೇಶಪೂರಿತ ಅಪ್ಲಿಕೇಶನ್ ಅನ್ನು ಸ್ಥಾಪಿಸುವಂತೆ ಹೇಳಿ ವಂಚನೆ ಮಾಡಿದ್ದರು.
ಇದನ್ನೂ ಓದಿ: ಓಂ ಶಕ್ತಿ ದರ್ಶನ ಪಡೆದು ವಾಪಾಸಾಗುತ್ತಿದ್ದಾಗ ದುರಂ*ತ; ಐವರು ಸಾ*ವು
ಇದು ಅವರ ಎಸ್ ಬಿಐ ಉಳಿತಾಯ ಖಾತೆಯಿಂದ 94,204 ರೂ. ಗಳನ್ನು ಕಳವು ಮಾಡಲು ಕಾರಣವಾಯಿತು. ಕದ್ದ ಹಣವನ್ನು ಯುಪಿಐ ವಹಿವಾಟುಗಳ ಮೂಲಕ ಬಹು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಯಿತು.
ಈ ಸಮಸ್ಯೆಯ ಮೂಲ ಯಾವುದೆಂದರೆ ಲೂಯಿಸ್ ಫಿಲಿಪ್ ಅವರ ವೆಬ್ ಸೈಟ್ ನಲ್ಲಿ 2021 ರಲ್ಲಿ ನಡೆದ ಡೇಟಾ ಉಲ್ಲಂಘನೆಯಾಗಿದ್ದು, ಇದರಿಂದ ಗ್ರಾಹಕರ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿದೆ. ಈ ಡೇಟಾವನ್ನು ದುರುಪಯೋಗಪಡಿಸಿಕೊಂಡು, ವಂಚಕನು ವಂಚನೆ ನಡೆಸಿದ್ದಾನೆ.
ಕಾನೂನು ಹೋರಾಟ ನಡೆಸಿದ ಪಲ್ಲಭ್
ಈ ವಿಷಯವನ್ನು ನಿಯಮದಂತೆ 24 ಗಂಟೆಯೊಳಗೆ ಪಲ್ಲಭ್ ಬ್ಯಾಂಕ್ ಗಮನಕ್ಕೆ ತಂದಿದ್ದರು. ಆದರೆ ನ್ಯೂ ಒಟಿಪಿ, ಎಂಪಿನ್ ಸೇರಿದಂತೆ ರಹಸ್ಯ ಮಾಹಿತಿಯನ್ನು ವಂಚಕರಿಗೆ ನೀಡಿದ್ದೀರಿ. ಹೀಗಾಗಿ ಇದರಲ್ಲಿ ಬ್ಯಾಂಕ್ ನ ತಪ್ಪಿಲ್ಲ. ಹಣ ಮರಳಿಸಲಾಗಲ್ಲ ಎಂದು ಬ್ಯಾಂಕ್ ಹೇಳಿತ್ತು. ಈ ಬಗ್ಗೆ ಪಲ್ಲಭ್ ಹೈಕೋರ್ಟ್ ಮೊರೆ ಹೋಗಿದ್ದರು. ಗುವಾಹಟಿ ಹೈಕೋರ್ಟ್ ಪಲ್ಲಭ್ ಪರ ತೀರ್ಪು ನೀಡಿತ್ತು. ಇದನ್ನು ಎಸ್ ಬಿಐ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿತ್ತು.
ಈ ಕುರಿತು ಇದೀಗ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ‘ಮೂರನೇ ವ್ಯಕ್ತಿಯಿಂದಾದ ವಂಚನೆ ಪ್ರಕರಣಕ್ಕೆ ಗ್ರಾಹಕ ಹೊಣೆಯಾಗುವುದಿಲ್ಲ ಎಂದು ಆರ್ ಬಿಐ ನಿಯಮಗಳೇ ಹೇಳಿವೆ. ಸೈಬರ್ ವಂಚನೆಯಂಥ ಪ್ರಕರಣದಲ್ಲಿ ಗ್ರಾಹಕರ ಹಿತ ಕಾಪಾಡುವುದು ಬ್ಯಾಂಕ್ ಗಳ ಹೊಣೆಗಾರಿಕೆ. ಈ ಪ್ರಕರಣದಲ್ಲಿ ತಾಂತ್ರಿಕ ಸಂಪನ್ಮೂಲ ಲಭ್ಯವಿದ್ದರೂ ವಂಚನೆ ತಡೆಯುವಲ್ಲಿ ಎಸ್ ಬಿಐ ವಿಫಲವಾಗಿದೆ’. ಈ ಹಿನ್ನೆಲೆ ಗ್ರಾಹಕನಿಗೆ ಹಣ ಮರಳಿಸುವಂತೆ ಎಸ್ ಬಿಐಗೆ ನ್ಯಾಯಪೀಠ ಸೂಚಿಸಿದೆ.