ನವದೆಹಲಿ: ಮಹಾರಾಷ್ಟ್ರ ಸರಕಾರದ ವಿರುದ್ದ ಸಮರ ಸಾರಿ, ಹಳೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ನೀಡಿದೆ.
ಇಂದು ಅರ್ನಬ್ ಗೋಸ್ವಾಮಿ ಜಾಮೀನು ಅರ್ಜಿಯ ವಿಚಾರವಾಗಿ ಸುಪ್ರೀಂಕೋರ್ಟ್ ನಲ್ಲಿ ನಡೆದ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅರ್ನಬ್ ಗೋಸ್ವಾಮಿ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು. ತಲಾ 50 ಸಾವಿರ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿಲಾಗಿದೆ.
ಅರ್ನಬ್ ಗೋಸ್ವಾಮಿ ಪರ ಖ್ಯಾತ ವಕೀಲ ಹರೀಶ್ ಸಾಲ್ವೆ ವಾದ ಮಂಡಿಸಿದ್ದರು. 2018 ರಲ್ಲಿ ಮುಗಿದಿದ್ದ ಪ್ರಕರಣವನ್ನು ಏಕಾಏಕಿ ತೆರೆದಿರುವುದು ಕಾನೂನುಬಾಹಿರ ಎನ್ನುವ ವಾದವನ್ನು ಅರ್ನಬ್ ಗೋಸ್ವಾಮಿ ಪರ ವಕೀಲರು ನ್ಯಾಯಾಲಯದ ಮುಂದೆ ಮಂಡಿಸಿದ್ದರು. ಮಹಾರಾಷ್ಟ್ರದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ನ್ಯಾಯಾಲಯದ ಗಮನ ಸೆಳೆದ ಹರೀಶ್ ಸಾಲ್ವೆ, ತನಗೆ ಸರಿಯಾದ ಸಂಬಳ ಸಿಗಲಿಲ್ಲ ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮುಖ್ಯಮಂತ್ರಿಯ ಹೆಸರನ್ನು ತನ್ನ ಸುಸೈಡ್ ನೋಟ್ ನಲ್ಲಿ ಬರೆದಿದ್ದಾನೆ. ಅಂದ ಮಾತ್ರಕ್ಕೆ ಮುಖ್ಯಮಂತ್ರಿಯನ್ನು ಬಂಧಿಸಲು ಸಾಧ್ಯವೆ ಎನ್ನುವ ಪ್ರಶ್ನೆಯನ್ನೂ ನ್ಯಾಯಾಲಯದ ಮುಂದಿಟ್ಟಿದ್ದರು.
ಮಹಾರಾಷ್ಟ್ರ ಸರಕಾರದ ಪರವಾಗಿ ವಾದ ಮಂಡಿಸಿದ ಕಾಂಗ್ರೇಸ್ ಮುಖಂಡ ಹಾಗೂ ಖ್ಯಾತ ನ್ಯಾಯವಾದ ಕಪಿಲ್ ಸಿಬಲ್ ಅರ್ನಬ್ ಗೋಸ್ವಾಮಿಗೆ ಜಾಮೀನು ನೀಡುವುದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದರಲ್ಲದೆ, ಸೆಷನ್ ಕೋರ್ಟ್ ನಲ್ಲಿ ಪ್ರಕರಣ ಇರುವ ಕಾರಣ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವುದು ಸಮಂಜಸವಲ್ಲ ಎನ್ನುವ ವಾದವನ್ನು ಮಂಡಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಈ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಮಹಾರಾಷ್ಟ್ರ ಹೈಕೋರ್ಟ್ ಆರೋಪಿಗಳಿಗೆ ಮಧ್ಯಂತರ ಜಾಮೀನು ನಿರಾಕರಿಸಿರುವುದು ಸರಿಯಾದ ನಿರ್ಧಾರವಲ್ಲ ಎನ್ನುವ ಅಭಿಪ್ರಾಯವನ್ನೂ ತಿಳಿಸಿದರಲ್ಲದೆ, ಎಲ್ಲಾ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿ ತೀರ್ಪು ನೀಡಿದರು.