ಕೈರೋ: ಸತತ ಆರು ದಿನಗಳ ಸುಯೆಜ್ ಕಾಲುವೆ ಮಾರ್ಗ ಬಂದ್ ಮಾಡಿದ್ದ ಬೃಹತ್ ಸರಕು ಸಾಗಾಣಿಕಾ ಹಡಗು ಎವರ್ ಗಿವೆನ್ ಕೊನೆಗೂ ದಾರಿ ಮಾಡಿಕೊಟ್ಟಿದ್ದು, ಟಗ್ ಬೋಟ್ ಗಳ ನೆರನಿಂದ ಎವರ್ ಗಿವೆನ್ ಕಾಲುವೆಯ ಮತ್ತೊಂದು ಬದಿಗೆ ಸರಿದಿದೆ. ನಾಲ್ಕು ಫುಟ್‌ಬಾಲ್ ಮೈದಾನಗಳಿಗಿಂತ ಉದ್ದದ ‘ಎಂವಿ ಎವರ್ ಗಿವೆನ್’ ಬೃಹತ್ ಹಡಗು ಕಳೆದ ಮಂಗಳವಾರದಿಂದ ಸುಯೆಜ್ ಕಾಲುವೆಗೆ ಅಡ್ಡಲಾಗಿ ಸಿಲುಕಿಕೊಂಡಿತ್ತು. ಇದರಿಂದಾಗಿ ಜಗತ್ತಿನಾದ್ಯಂತ ಕಚ್ಚಾ ತೈಲ ಪೂರೈಕೆ ಸೇರಿದಂತೆ ಹಲವು ವಸ್ತುಗಳ ಸಾಗಣೆಯಲ್ಲಿ ವ್ಯತ್ಯವಾಗಿತ್ತು. ಕಾಲುವೆ ಸಂಚಾರ ಅಡಚಣೆಯಿಂದಾಗಿ ಜಾಗತಿಕ ವಹಿವಾಟಿನ ಮೇಲೆ ಸುಮಾರು 6ರಿಂದ 10 ಬಿಲಿಯನ್ ಡಾಲರ್‌ಗಳಷ್ಟು ಹೊರೆಯಾಗಿತ್ತು. ಇದೀಗ ಸತತ ಕಾರ್ಯಾಚರಣೆಗಳ ಫಲವಾಗಿ ಎವರ್ ಗಿವೆನ್ ಹಡಗು ಮುಂದಕ್ಕೆ ಸಾಗಿದ್ದು, ಹಡಗನ್ನು ಸತತ ಕಾರ್ಯಾಚರಣೆಗಳ ಬಳಿಕ ಚಲಿಸುವಂತೆ ಮಾಡಲಾಗಿದೆ.ಇದೀಗ ಎವರ್ ಗಿವೆನ್ ಹಡಗು ಮುಂದಕ್ಕೆ ಸಾಗಿದ್ದು, ಸುಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ಆರು ದಿನಗಳಿಂದ ಸಿಲುಕಿಕೊಂಡಿದ್ದ ಬೃಹತ್ ಕಂಟೇನರ್ ಹಡಗು ಸೋಮವಾರ ಮತ್ತೆ ಸಂಚಾರ ಆರಂಭಿಸಿದೆ. ಇದರಿಂದ ಜಾಗತಿಕ ವಾಣಿಜ್ಯ ವಹಿವಾಟುಗಳ ಪ್ರಮುಖ ಹಾದಿ ತಿಳಿಯಾಗುವ ಭರವಸೆ ಮೂಡಿದೆ. ಅಂತೆಯೇ ಸುಯೆಜ್ ಕಾಲುವೆಯ ಎರಡು ಬದಿಗಳಲ್ಲಿ ಲಂಗರು ಹಾಕಿ ನಿಂತಿದ್ದ ಸುಮಾರು 450ಕ್ಕೂ ಅಧಿಕ ಸರಕು ಸಾಗಾಣಿಕಾ ಬೋಟ್ ಗಳ ಮಾರ್ಗ ಸುಗುಮವಾಗಿದೆ.