ನವದೆಹಲಿ : ಸಾಮಾನ್ಯವಾಗಿ ಮತದಾರರು ತಮ್ಮ ನೆಚ್ಚಿನ ನಾಯಕರಿಗೆ ಮತಚಲಾಯಿಸುತ್ತಾರೆ. ಹಾಗಂತ ಸ್ಪರ್ಧಿಸುವ ನಾಯಕರು ತಮಗೇ ಮತ ಹಾಕಿಕೊಳ್ಳುತ್ತಾರೆ ಅಲ್ಲವೇ, ಆದ್ರೆ, ಈ ಬಾರಿ ಚುನಾವಣೆಯಲ್ಲಿ ಹಾಗಾಗಿಲ್ಲ. ಘಟಾನುಘಟಿ ಅಭ್ಯರ್ಥಿಗಳು ತಮಗೆ ತಾವು ಮತ ಹಾಕಿಕೊಳ್ಳದೇ ಬೇರೆ ಅಭ್ಯರ್ಥಿಗೆ ಮತ ಹಾಕಿದ್ದಾರೆ.
ಹೌದು, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಸೇರಿದಂತೆ ಹಲವು ನಾಯಕರು ತಮ್ಮ ಮತವನ್ನು ತಮಗೆ ಚಲಾಯಿಸಲು ಸಾಧ್ಯವಾಗಿಲ್ಲ. ಈ ನಾಯಕರು ಚುನಾವಣೆಗೆ ಸ್ಪರ್ಧಿಸುವ ಸ್ಥಳಗಳ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಲಾಗಿಲ್ಲ ಅನ್ನೋದೇ ಇದಕ್ಕೆ ಕಾರಣ.
ಮೇ 7 ರಂದು ನಡೆದ ಮೂರನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ಮತ್ತು ಅಖಿಲೇಶ್ ಯಾದವ್ ಸೈಫೈನಲ್ಲಿ ಮತ ಚಲಾಯಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿ ಮತವೂ ಅಮೂಲ್ಯವಾಗಿದ್ದು ಕರ್ನಾಟಕದ ಎ.ಆರ್.ಕೃಷ್ಣಮೂರ್ತಿ ಮತ್ತು ರಾಜಸ್ಥಾನದ ಸಿ.ಪಿ.ಜೋಶಿ ಅವರ ಸೋಲು ಇದಕ್ಕೊಂದು ದೊಡ್ಡ ಉದಾಹರಣೆ. ಇವರು ಕೇವಲ ಒಂದು ಓಟಿನಿಂದ ಸೋತಿದ್ದರು ಅನ್ನೋದು ಗಮನಾರ್ಹ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಆದರೆ, ಅಹಮದಾಬಾದ್‌ನ ಮತದಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು ನೋಂದಾಯಿಸಿದ ಕಾರಣ, ಅವರು ಮೇ 7 ರಂದು ಅಹಮದಾಬಾದ್‌ನ ನಿಶಾನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಮತದಾನ ಮಾಡಿದರು.
ರಾಹುಲ್ ಗಾಂಧಿ
ಕೇರಳದ ವಯನಾಡ್ ಹಾಗೂ ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ದೆಹಲಿಯ ಮತದಾರ. 40-ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರನ್ನು ದಾಖಲಿಸಲಾಗಿದೆ.
ಅಖಿಲೇಶ್ ಯಾದವ್
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು 12 ವರ್ಷಗಳ ನಂತರ ಕನೌಜ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರು ಕನೌಜ್‌ನಲ್ಲಿ ತಮ್ಮ ಮತವನ್ನು ಚಲಾಯಿಸಲು ಸಾಧ್ಯವಾಗಿಲ್ಲ. ಅವರು ಮೇ 7 ರಂದು ತಮ್ಮ ಗ್ರಾಮ ಸೈಫೈನಲ್ಲಿ ಮತ ಚಲಾಯಿಸಿದರು. ಸೈಫೈ ಮೈನ್‌ಪುರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಅವರ ಪತ್ನಿ ಡಿಂಪಲ್ ಯಾದವ್ ಇಲ್ಲಿಂದ ಸ್ಪರ್ಧಿಸುತ್ತಿದ್ದಾರೆ.
ಮೇನಕಾ ಗಾಂಧಿ
ಎಂಟು ಬಾರಿಯ ಬಿಜೆಪಿ ಸಂಸದೆ ಮೇನಕಾ ಗಾಂಧಿ ಕೂಡ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಬಾರಿ ಅವರು ಸುಲ್ತಾನ್‌ಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ನವದೆಹಲಿ ವಿಧಾನಸಭೆಯ ಮತದಾರರ ಪಟ್ಟಿಯಲ್ಲಿ ಮೇನಕಾ ಗಾಂಧಿ ಅವರ ಹೆಸರನ್ನು ನೋಂದಾಯಿಸಲಾಗಿದೆ.
ಇದನ್ನೂ ಓದಿ : ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!
ಯೂಸುಫ್ ಪಠಾಣ್
ಕ್ರಿಕೆಟಿಗ ಯೂಸುಫ್ ಪಠಾಣ್ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಶ್ಚಿಮ ಬಂಗಾಳದ ಬಹರಂಪುರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಯೂಸುಫ್ ಪಠಾಣ್ ಅವರು ಗುಜರಾತ್‌ನ ಅಕೋಟಾ ವಿಧಾನಸಭಾ ಕ್ಷೇತ್ರದ ಮತದಾರ.
ಕನ್ಹಯ್ಯಾ ಕುಮಾರ್
ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್ ಕೂಡ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಯಾಕಂದ್ರೆ ಅವರು ಬೇಗುಸರಾಯ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತೆಘ್ರಾ ವಿಧಾನಸಭಾ ಕ್ಷೇತ್ರದ ಮತದಾರ.
ಕೀರ್ತಿ ಆಜಾದ್
ಬರ್ಧಮಾನ್-ದುರ್ಗಾಪುರ ಲೋಕಸಭಾ ಕ್ಷೇತ್ರದ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಕೀರ್ತಿ ಆಜಾದ್ ಕೂಡ ಮತದಾನ ಮಾಡಲು ಸಾಧ್ಯವಿಲ್ಲ. ದೆಹಲಿಯ ಅಂಬೇಡ್ಕರ್ ನಗರದ ಮತದಾರರ ಪಟ್ಟಿಯಲ್ಲಿ ಆಜಾದ್ ಅವರ ಹೆಸರು ಇದೆ.
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ ಅವರು ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಸಿನ್ಹಾ ಬಿಹಾರದ ಬಂಕಿಪುರ ವಿಧಾನಸಭಾ ಕ್ಷೇತ್ರದ ಮತದಾರ.
ಸಾಧ್ವಿ ನಿರಂಜನ್ ಜ್ಯೋತಿ
ಉತ್ತರ ಪ್ರದೇಶದ ಫತೇಪುರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರಿಗೂ ಮತ ಹಾಕಲು ಸಾಧ್ಯವಾಗುವುದಿಲ್ಲ. ಅವರು ಹಮೀರ್‌ಪುರ ವಿಧಾನಸಭೆಯ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
ಕಿಶೋರಿ ಲಾಲ್ ಶರ್ಮಾ
ಈ ಬಾರಿ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿದೆ. ಅವರ ಮುಂದೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಇದ್ದಾರೆ. ವಿಶೇಷವೆಂದರೆ ಕಿಶೋರಿ ಲಾಲ್ ಶರ್ಮಾ ಅವರು ಅಮೇಥಿಯಲ್ಲಿ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಕಿಶೋರಿ ಲಾಲ್ ಶರ್ಮಾ ಲುಧಿಯಾನ ಸೆಂಟ್ರಲ್ ಅಸೆಂಬ್ಲಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ.
ಒಂದು ಮತದಿಂದ ಸೋಲು ಕಂಡಿದ್ದ ಅಭ್ಯರ್ಥಿಗಳು
2004 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನತಾ ದಳ (ಜಾತ್ಯತೀತ) ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಒಂದು ಮತದಿಂದ ಸೋಲನ್ನು ಎದುರಿಸಬೇಕಾಯಿತು. ಸಂತೇಮರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ 40,751 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರು.
2008 ರಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಜೋಶಿ ಅವರು ರಾಜಸ್ಥಾನದ ನಾಥದ್ವಾರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣ್ ಸಿಂಗ್ ಚೌಹಾಣ್ ವಿರುದ್ಧ ಒಂದು ಮತದಿಂದ ಸೋತರು. ಸಿ.ಪಿ.ಜೋಶಿ 62,215 ಮತ್ತು ಕಲ್ಯಾಣ್ ಸಿಂಗ್ ಚೌಹಾಣ್ 62,216 ಮತಗಳನ್ನು ಪಡೆದರು.