ಉಡುಪಿ: ಉಡುಪಿ ಹಾಗೂ ಮಣಿಪಾಲದಲ್ಲಿ ಬೀದಿ ನಾಯಿಗಳ ಉಪಟಳ ವಿಪರೀತವಾಗಿದ್ದು, ಸಾರ್ವಜನಿಕರು ಈ ಬಗ್ಗೆ ನಗರ ಸಭೆಗೆ ಪದೇ ಪದೇ ದೂರು ನೀಡಿದರೂ ನಗರ ಸಭೆ, ಸಬೂಬು ಹೇಳಿ ಮೌನವಾಗಿದೆ.
ಉಡುಪಿಯ ಅಜ್ಜರ ಕಾಡು, ಮಿಷನ್ ಕಾಂಪೌಂಡ್, ಬನ್ನಂಜೆ, ಸಿಟಿ ಬಸ್ ನಿಲ್ದಾಣ, ಹಾಗೂ ಮಣಿಪಾಲ ಸಿಟಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ.
ರಾತ್ರಿ ವೇಳೆ ಕೆಲಸ ಬಿಟ್ಟು ಮನೆಗೆ ನಡೆದುಕೊಂಡು ಬರುವವರನ್ನು ಬೀದಿ ನಾಯಿಗಳ ಗುಂಪು ಅಟ್ಟಾಡಿಸಿಕೊಂಡು ಬರುತ್ತಿದ್ದು, ನಡೆದುಕೊಂಡು ಬರೋದಕ್ಕೂ ಭಯ ಪಡುವ ವಾತಾವರಣ ನಿರ್ಮಾಣ ಆಗಿದೆ.
ಇತ್ತೀಚೆಗೆ ಮಣಿಪಾಲದಲ್ಲಿ ಶಾಲೆಯಿಂದ ಮನೆಗೆ ಬರುತ್ತಿದ್ದ ಪುಟ್ಟ ಬಾಲಕಿಯನ್ನು ಬೀದಿ ನಾಯಿಗಳು ಕಚ್ಚಿ ಗಂಭೀರ ಗಾಯಗೊಳಿಸಿದೆ.
ಅಲ್ಲದೇ ಹಲವಾರು, ನಿರಾಶ್ರಿತರು, ಹಿರಿಯರನ್ನೂ, ಬೀದಿ ನಾಯಿಗಳು ಕಡಿದು ಗಾಯಗೊಳಿಸಿದೆ. ಪ್ರತಿವರ್ಷ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲಾಗುತ್ತಿದ್ದರೂ, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮೇಲೆ ಅನುಮಾನ ಮೂಡುವಂತಾಗಿದೆ.
ಬೀದಿ ನಾಯಿಗಳ ಉಪಟಳದ ಬಗ್ಗೆ ನಗರ ಸಭೆಯಲ್ಲಿ ವಿಷಯ ಪ್ರಸ್ತಾಪ ಆದ್ರೂ, ಸಮರ್ಪಕ ಉತ್ತರ ಸಿಗಲಿಲ್ಲ, ಹೀಗಾಗಿ ಆದಷ್ಟು ಶೀಘ್ರವಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹ ಕೇಳಿ ಬಂದಿದೆ.