ಮಂಗಳೂರು : ದ.ಕ.ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಕಾರ್ಯಕರ್ತರನ್ನು ವಾಟ್ಸಾಪ್ ಸಂದೇಶ ಫಾರ್ವಡ್ ಮಾಡಿದ ಕಾರಣ ಹೇಳಿ ಪೊಲೀಸ್ ಕೇಸ್ ಹಾಕಿ ಕಿರುಕುಳ ಕೊಡುತ್ತಿರುವ ಬಗ್ಗೆ ಖಂಡನೆ ಹಾಗೂ ತೊಂದರೆ ನೀಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ನೇತೃತ್ವದಲ್ಲಿ ಜಿಲ್ಲೆಯ ಹಿರಿಯ ನಾಯಕರುಗಳನ್ನು ಒಳಗೊಂಡ ನಿಯೋಗ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದೆ.
“ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮತ್ತು ಟೀಕೆ ಮಾಡುವುದು ವಿರೋಧ ಪಕ್ಷಗಳ ಹಕ್ಕು ಮತ್ತು ಕರ್ತವ್ಯ ಆಗಿರುತ್ತದೆ. ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರುಗಳು ಸರಕಾರದ ಜನವಿರೋಧಿ ನೀತಿಗಳ ವಿರುದ್ಧದ ಸಂದೇಶಗಳನ್ನು ಕಳುಹಿಸುವ ಕೆಲಸವನ್ನು ಮಾಡುತ್ತಿರುತ್ತಾರೆ.
ಹಾಗೂ ಆಡಳಿತ ಬಿಜೆಪಿ ಪಕ್ಷದ ನಾಯಕರ ವಿರುದ್ಧದ ಸಂದೇಶಗಳನ್ನು ಫಾರ್ವಡ್ ಮಾಡುತ್ತಾರೆ.
ಆದರೆ, ಇತ್ತೀಚಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಮತ್ತು ಅವರ ವಿರುದ್ಧ ದೂರು ದಾಖಲು ಮಾಡಿ ಬಂಧಿಸುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ, ಅನ್ಯಾಯ ಮಾಡುವುದನ್ನು ಆಡಳಿತ ಪಕ್ಷ ಪೊಲೀಸ್ ಇಲಾಖೆಯ ಮೂಲಕ ಮಾಡಿಸುತ್ತಿದೆ.
ಈ ರೀತಿಯ ಕ್ರಮಗಳು ಸರಿಯಲ್ಲ ಹಾಗೂ ಮುಂದಕ್ಕೆ ಈ ರೀತಿಯ ಅನ್ಯಾಯದ ಕ್ರಮಗಳನ್ನು ಏಕ ಪಕ್ಷೀಯವಾಗಿ ಕೈಗೊಳ್ಳಬಾರದು.”
“ಕೇವಲ ಫಾರ್ವಡ್ ಮಾಡಿರುವ ಈ ರೀತಿಯ ಪ್ರಕರಣಗಳಲ್ಲಿ ಈ ಹಿಂದೆ ಕೇಸ್ ದಾಖಲಿಸಿ ಬಂಧಿಸುವ ಕ್ರಮಗಳನ್ನು ಕೈಗೊಂಡಿರಲಿಲ್ಲ.
ಈಗಾಗಲೇ ಕೇಸ್ ದಾಖಲಿಸಿ ವಿನಾ ಕಾರಣ ಆಡಳಿತ ಪಕ್ಷದ ಒತ್ತಡಕ್ಕೆ ಒಳಗಾಗಿ ಕಾಂಗ್ರೆಸ್ ಕಾರ್ಯಕರ್ತರಿಗೆ ತೊಂದರೆ ಕೊಡುವುದನ್ನು ನಿಲ್ಲಿಸಬೇಕೆಂದು ನಿಯೋಗ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಮಾಜಿ ಸಚಿವ ರಾಮಾನಾಥ ರೈ,ಮಾಜಿ ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವಾ, ಯುವ ಮುಖಂಡರಾದ ಮಿಥುನ್ ರೈ, ಲುಕ್ಕಾನ್, ಪದ್ಮಪ್ರಸಾದ್ ಮತ್ತಿತರರು ನಿಯೋಗದಲ್ಲಿದ್ದರು.