ಮಂಗಳೂರು: ರಾಜ್ಯಮಟ್ಟದ ಕೃಷಿ ಮೇಳ ಇದೇ ಜ.14, 15, 16ರಂದು ಮೂಲ್ಕಿ ಸಮೀಪದ ಕೊಲ್ನಾಡ್ನಲ್ಲಿ ನಡೆಯಲಿದೆ. ಕೃಷಿ ಸಿರಿ-2022 ಇದರ ಆಮಂತ್ರಣ ಪತ್ರಿಕೆಯನ್ನು ಶಾಸಕ ಉಮನಾಥ್ ಕೋಟ್ಯಾನ್ ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಶಾಸಕ, ಇಂದಿನ ಯುವಜನತೆಗೆ ಕೃಷಿಯ ಮೇಲಿನ ಮಮತೆ ಕಡಿಮೆಯಾಗುತ್ತಿದೆ.
ಸಾಂಪ್ರದಾಯಿಕ ಕೃಷಿ ಪದ್ಧತಿ ನಾಶ ಹೊಂದುತ್ತಿದೆ. ಅದನ್ನು ಯುವಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ ರಾಜ್ಯಮಟ್ಟದ ಕೃಷಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಕೃಷಿ ಬದುಕಿನ ಹಿನ್ನೆಲೆ, ಗೋವು ಸಾಕಾಣಿಕೆ, ವ್ಯವಸಾಯದ ಬಗ್ಗೆ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಮಾರ್ಗದರ್ಶನ ನೀಡಲಾಗುವುದು.
ಕೃಷಿಗೆ ಸಂಬಂಧಪಟ್ಟಂತೆ ವಿವಿಧ ಕೌಂಟರ್ ಗಳನ್ನು ತೆರೆದು ಪ್ರಾತ್ಯಕ್ಷಿಕೆ ನೀಡಲಾಗುವುದು, ಮೂರು ದಿನಗಳ ಕಾರ್ಯಕ್ರಮವನ್ನು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸಲಿದ್ದಾರೆ ಎಂದರು.
ವಿನಯ ಕೃಷಿ ಬೆಲೆಗಾರರ ಸಂಘ(ರಿ.) ಕೊಲ್ನಾಡು, ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಂಗಳೂರು ವಿಶ್ವವಿದ್ಯಾನಿಲಯ,
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಸಾವಯವ ಕೃಷಿ ಗ್ರಾಹಕ ಬಳಗ ಸೇರಿದಂತೆ ಸ್ಥಳೀಯ ಸಂಘಟನೆಗಳ ಸಹಕಾರದಲ್ಲಿ ನಡೆಸಲಾಗುವುದು.
ಸುಮಾರು 10 ಎಕರೆ ಸ್ಥಳದಲ್ಲಿ ಕೃಷಿಗೆ ಸಂಬಂಧಪಟ್ಟ 200ಕ್ಕೂ ಅಧಿಕ ಸ್ಟಾಲ್ ಗಳನ್ನು ತೆರೆದು ಕೃಷಿಕರಿಗೆ ಮಾಹಿತಿ ವಿನಿಮಯ ಕಾರ್ಯಕ್ರಮ ಹಾಗೂ ವಿವಿಧ ವಿಷಯಕ್ಕೆ ಸಂಬಂಧಿಸಿ ವಿಚಾರ ಗೋಷ್ಠಿ, ಪಾರಂಪರಿಕ ಕೃಷಿ ಬದುಕಿನ ಬಗ್ಗೆ ಪರಿಚಯಿಸಲಾಗುವುದು ಎಂದು ಮಾಹಿತಿ ನೀಡಿದರು.
ಇದರ ಜೊತೆಗೆ ನಾಗಾರಾಧನೆ,
ಭೂತಾರಾಧನೆ, ತಾರಸಿ ಕೃಷಿ ಸಹಿತ ಇನ್ನಿತರ ವಿಷಯಗಳ ಬಗ್ಗೆ ಮಾಹಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿಕರಿಗೆ ಸಿಗುವ ಆರ್ಥಿಕ ಸೌಲಭ್ಯ, ಬ್ಯಾಂಕ್ ಲೋನ್ ಸೌಲಭ್ಯ, ಮಕ್ಕಳಿಗೆ ಕ್ರೀಡಾ ವ್ಯವಸ್ಥೆ, ಫುಡ್ ಕೋರ್ಟ್ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಗೋಷ್ಟಿಯಲ್ಲಿ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ, ಜಗದೀಶ್ ಪೈ, ನವೀನ್ ಶೆಟ್ಟಿ ಎಡ್ಮೆಮಾರ್, ಮಾಧ್ಯಮ ಸಮಿತಿಯ ಜಗನ್ನಾಥ ಶೆಟ್ಟಿ ಬಾಳ, ಹರಿಕೃಷ್ಣ ಪುನರೂರು, ಸಮಿತಿ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಜಿ.ಆರ್. ಪ್ರಸಾದ್, ಸಮಿತಿ ಸಂಚಾಲಕ ಕೃಷ್ಣ ಶೆಟ್ಟಿ, ಚಂದ್ರಹಾಸ್, ಸೋಮಪ್ಪ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು
ಮಂಗಳೂರು : ವೆಣೂರಿನ ಬರ್ಕಜೆ ಸಮೀಪದಲ್ಲಿರುವ ಸ್ನೇಹಿತನ ಮನೆಗೆ ತೆರಳಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ನೀರು ಪಾಲಾಗಿದ್ದಾರೆ. ಮದ್ಯಾಹ್ನದ ಊಟ ಮುಗಿಸಿ ಸಮೀಪದ ನದಿಗೆ ಈಜಲು ತೆರಳಿದ್ದ ಮೂವರು ನೀರಿನ ಸೆಳೆತಕ್ಕೆ ಸಿಲುಕಿ ಪ್ರಾ*ಣ ಕಳೆದುಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂಡಕೋಡಿ ಗ್ರಾಮದ ವಾಲ್ಟರ್ ಎಂಬವರ ಮನೆಗೆ ಮೂಡಬಿದ್ರೆಯ ಲಾರೆನ್ಸ್ 20 ವರ್ಷ, ಬೆಳ್ತಂಗಡಿ ತಾಲೂಕಿನ ಪಾರೆಂಕಿ ಗ್ರಾಮದ ಸೂರಜ್ 19 ವರ್ಷ, ಹಾಗೂ ಬಂಟ್ವಾಳದ ವಗ್ಗ ಗ್ರಾಮದ ಜೈಸನ್ 19 ವರ್ಷ ಈ ಮೂವರು ಹೋಗಿದ್ದಾರೆ. ಮದ್ಯಾಹ್ನದ ಊಟವನ್ನು ಮುಗಿಸಿದ ಇವರು ಜೊತೆಯಾಗಿ ಬರ್ಕಜೆ ಸಮೀಪದ ಡ್ಯಾಂ ಬಳಿ ನದಿಯಲ್ಲಿ ಈಜಲು ಹೋಗಿದ್ದಾರೆ. ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಮೂವರೂ ನೀರುಪಾಲಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಿಯರು ರಕ್ಷಣೆಗೆ ನದಿಗೆ ದುಮಿಕಿದ್ದಾರೆ. ಆದ್ರೆ ಮೂವರನ್ನು ನದಿಯಿಂದ ಮೇಲೆತ್ತುವ ಮೊದಲೇ ಇ*ಹಲೋಕ ತ್ಯಜಿಸಿದ್ದಾರೆ. ಮೂವರೂ ಮಂಗಳೂರಿನ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ.
ಮಂಗಳೂರು: ಮುಂಬೈ ನಗರದ ಮೇಲೆ ಭಯೋತ್ಪಾದಕರು ನಡೆಸಿದ ದಾ*ಳಿಯ ಸಂದರ್ಭದಲ್ಲಿ ಉಗ್ರರ ವಿರುದ್ಧ ಹೋರಾಡಿ ಪ್ರಾ*ಣವನ್ನು ಬ*ಲಿದಾನ ಮಾಡಿದ ಹುತಾತ್ಮರನ್ನು ಸ್ಮರಿಸುವ ರಾಷ್ಟ್ರಜಾಗೃತಿಯ ಅಸುವು ರಾಷ್ಟ್ರ ಸಮರ್ಪಿತ ಕಾರ್ಯಕ್ರಮವು ರಾಷ್ಟ್ರೀಯವಾದಿ ಕ್ರೈಸ್ತರ ವೇದಿಕೆ ವತಿಯಿಂದ ಜರುಗಿತು.
ಕದ್ರಿ ಯುದ್ಧ ಸ್ಮಾರಕದ ಬಳಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಕಾಲೇಜಿನ ಉಪಕುಲಪತಿ ವಂದನೀಯ ಡಾ ಪ್ರವೀಣ ಮಾರ್ಟಿಸ್ ವಹಿಸಿದ್ದರು. ಡಾ ವಾದಿರಾಜ ಗೋಪಾಡಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಎನ್‌ಎಂ ಪಿಎ ಸಿಐಎಸ್ಎಫ್‌ನ ಡೆಪ್ಯುಟಿ ಕಮಾಂಡೆಂಟ್ ರಾಜೇಂದ್ರ ಪ್ರಸಾದ್ ಪಾಠಕ್, ಕಾರ್ಯಕ್ರಮ ಸಂಘಟಕ ಡಾ ಶೇಷಪ್ಪ, ಡಾ ನಿಶ್ಚಿತ್ ಡಿ ಸೋಜಾ, ಹಿರಿಯ ಪೊಲೀಸ್ ಅಧಿಕಾರಿ ಅಜ್ಜತ್ ಆಲಿ, ಸಾರ್ಜೆಂಟ್ ಶ್ರೀಕಾಂತ್ ಶೆಟ್ಟಿ ಬಾಳ, ನ್ಯಾಯವಾದಿ ಬಿ. ನಯನ ಪೈ. ವಿದುಷಿ ಗುರು ಶ್ರೀಮತಿ ಸೌಮ್ಯ ಸುಧೀಂದ್ರ ರಾವ್, ಕಾರ್ಪೋರೇಟರ್ ಶಕೀಲಾ ಕಾವ ಮೊದಲಾದವರಿದ್ದರು. ನೃತ್ಯಸುಧಾ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯರಿಂದ ಹುತಾತ್ಮ ಸೈನಿಕರಿಗೆ ನೃತ್ಯನಮನ ನಡೆಯಿತು.
ಉಪ್ಪಿನಂಗಡಿ : ದಕ್ಷಿಣ ಕಾಶಿ, ಗಯಾಪದ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ಉಪ್ಪಿನಂಗಡಿ ಪಟ್ಟಣದ ಪೂರ್ವಕ್ಕೆ ನೇತ್ರಾವತಿ ನದಿ ತಟಕ್ಕೆ ಹತ್ತಿರದಲ್ಲಿ ನಿತ್ಯಹರಿದ್ವರ್ಣದ ಸಸ್ಯ ರಾಶಿಯ ನಡುವೆ ಕಂಗೊಳಿಸುವ ಕ್ಷೇತ್ರ ಪದಾಳ ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನ. ಸಹಸ್ರಾರು ವರ್ಷಗಳ ಹಿಂದೆ ಲೋಕ ಸಂಚಾರಿಗಳಾಗಿದ್ದ ಶ್ರೇಷ್ಠ ಋಷಿ ಮುನಿಗಳು ನೇತ್ರಾವತಿ ನದೀ ತೀರದಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಅಲೌಕಿಕ ಶಕ್ತಿ ಹಾಗೂ ಶ್ರೀಸುಬ್ರಹ್ಮಣ್ಯನ ಸಾನ್ನಿಧ್ಯವಿರುವುದನ್ನು ಗುರುತಿಸಿದ, ಮಹಾತ್ಮರು ಶ್ರೀ ಸ್ವಾಮಿಯನ್ನು ಇಂದಿನ ಪದಾಳದಲ್ಲಿ ಸ್ಥಾಪಿಸಿದರೆಂಬುದು ಐತಿಹ್ಯ.
ದೇವಾಲಯ ಕಟ್ಟಿಸಿದ ಕದಿಕ್ಕಾರು ರಾಣಿ :
ಕಾಲಾಂತರದಲ್ಲಿ ಸ್ಥಳೀಯ ಕದಿಕ್ಕಾರು ಬೀಡಿನ ರಾಣಿಯೊಬ್ಬಳು ಪುತ್ರ ಸಂತಾನದ ಅಪೇಕ್ಷೆಯುಳ್ಳವಳಾಗಿ ಶ್ರೀ ದೇವರಿಗೆ ದೇವಸ್ಥಾನ ಕಟ್ಟಿಸುವ ಹರಕೆಯನ್ನು ಹೊತ್ತು, ಸಂಕಲ್ಪವನ್ನು ಪೂರೈಸಿದ ಮೇಲೆ ವೇದ ವಿದ್ವಾಂಸರಾದ ಬ್ರಾಹ್ಮಣ ಅರ್ಚಕರೊಬ್ಬರನ್ನು ದೇವಸ್ಥಾನದ ಉಸ್ತುವಾರಿ ಹಾಗೂ ದೇವರ ನಿತ್ಯಪೂಜೆಗಾಗಿ ನೇಮಿಸಿದಳಂತೆ. ಶ್ರೀ ದೇವರ ಅರ್ಚಕನಾದ ಆ ಬ್ರಾಹ್ಮಣನು ದೇವಸ್ಥಾನದ ನಿತ್ಯ ನೈಮಿತ್ತಿಕಗಳೊಂದಿಗೆ ಅಲ್ಲೇ ಸಮೀಪದಲ್ಲಿ ‘ಮಠ’ವೊಂದನ್ನು ಸ್ಥಾಪಿಸಿ, ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದುದರಿಂದ ಆ ಪ್ರದೇಶವು ‘ಮಠ’ವೆಂದೇ ಖ್ಯಾತವಾಯಿತು.
ಬ್ರಾಹ್ಮಣ ಬ್ರಹ್ಮರಾಕ್ಷಸನಾಗಿ ಉಪಟಳ :
ದೇವಸ್ಥಾನ ಹಾಗೂ ಮಠದ ಖರ್ಚು ವೆಚ್ಚಗಳು ಅಧಿಕವಾದಾಗ ತನ್ನನ್ನು ನೇಮಿಸಿದ ರಾಣಿಯಲ್ಲಿ ನೆರವನ್ನು ಯಾಚಿಸಿದಾಗ ಬ್ರಾಹ್ಮಣನಿಗೆ ಅವಮಾನ ಮಾಡಿದ್ದರಿಂದ ಮನನೊಂದು ಅಪಮೃತ್ಯುವಿಗೆ ಈಡಾಗಿ ಮೋಕ್ಷ ಸಿಗದೆ ಬ್ರಹ್ಮರಾಕ್ಷಸನಾಗಿ, ಪರಿಸರದಲ್ಲಿ ಉಪಟಳ ನೀಡುತ್ತಿರುವ ವಿಚಾರವು ಇತ್ತೀಚೆಗೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ವಿಷಯವಾಗಿದೆ.
ಕದಿಕ್ಕಾರು ಬೀಡಿನ ಅರಸೊತ್ತಿಗೆಯು ಸಮಾಪ್ತಿಯಾದ ಮೇಲೆ ದೇವಾಲಯವು ಶ್ರೀ ಕ್ಷೇತ್ರ ಧರ್ಮಸ್ಥಳದ ಅಧೀನಕ್ಕೆ ಬಂದು ನಿತ್ಯ ಪೂಜಾದಿ ಕಾರ್ಯಗಳು ನಡೆಯುತ್ತಿದ್ದವು. ಕ್ರಿ ಶ. 1923ರಲ್ಲಿ ಈ ದೇವಾಲಯವು ಅಗ್ನಿಗೆ ಆಹುತಿಯಾಗಿ ದೇವಾಲಯವು ನಾಶವಾಗುವುದರೊಂದಿಗೆ ಪೂಜಾದಿ ಕಾರ್ಯಗಳು ನಿಂತುಹೋದವು. ಸುತ್ತಮುತ್ತಲಿನ ಜಮೀನುಗಳ ಒಡೆತನವು ಯಾರ್ಯಾರಿಗೋ ಸೇರಿ ದೇವಸ್ಥಾನವು ಕಾಡು ಪಾಲಾಯಿತು.
ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಸತ್ಯ!
ಮುಂದೆ ಈ ದೇವಸ್ಥಾನದ ಸುತ್ತಮುತ್ತಲಿನ ಕೃಷಿ ಭೂಮಿಯನ್ನು ನಡುಸಾರು ಕುಟುಂಬದವರು ಖರೀದಿಸಿದಾಗ, ದೇವಸ್ಥಾನದ ಪಳೆಯುಳಿಕೆಗಳ ಮಾಹಿತಿ ಪಡೆದು ಊರ ಹತ್ತು ಸಮಸ್ತರ ಸಹಕಾರದಿಂದ ಕ್ರಿ. ಶ. 1993ರಲ್ಲಿ ಅಷ್ಟಮಂಗಲ ಪ್ರಶ್ನೆಯನ್ನಿರಿಸಿದಾಗ, ಶ್ರೀ ಕ್ಷೇತ್ರ ಧರ್ಮಸ್ಥಳದೊಂದಿಗೆ ‘ಪದಾಳ’ಕ್ಕಿರುವ ಸಂಬಂಧವು ತಿಳಿದುಬಂದಂತೆ ಧರ್ಮಾಧಿಕಾರಿಗಳ ಸಲಹೆ ಸೂಚನೆ ಪಡೆದು ಜೀರ್ಣೋದ್ಧಾರಕ್ಕೆ ಪ್ರಾರಂಭಿಸಲಾಯಿತು.
ದೇವಸ್ಥಾನದ ‘ಪರಂಬೋಕು’ ಎಂದು ದಾಖಲಿಸಲ್ಪಟ್ಟ 0.96 ಎಕ್ರೆ ಜಮೀನಿನಲ್ಲಿ ಊರ ಪರವೂರ ದಾನಿಗಳ ಸಹಕಾರದಿಂದ ಮತ್ತೆ ದೇವಸ್ಥಾನವು ಮನನಿರ್ಮಾಣಗೊಂಡು ಕ್ರಿ. ಶ. 2009ರಲ್ಲಿ ಶ್ರೀ ದೇವರ ಪುನರ್‌ಪ್ರತಿಷ್ಠೆ, ಅಷ್ಠಬಂಧ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ನಂಬಿದವರ ಕೈ ಬಿಡದ ಸುಬ್ರಹ್ಮಣ್ಯ ಸ್ವಾಮಿ :
ಶ್ರೀ ದೇವರಿಗೆ ಬ್ರಹ್ಮಕಲಶ ನಡೆದು ಈಗಾಗಲೇ ಹದಿನೈದು ವರ್ಷಗಳಾಗಿದ್ದು, ಸಾನ್ನಿಧ್ಯ ವೃದ್ಧಿಗಾಗಿ ಅಷ್ಠಬಂಧ ಬ್ರಹ್ಮಕಲಶ ನಡೆಸುವ ಉದ್ದೇಶದಿಂದ ಪ್ರಶ್ನಾಚಿಂತನೆ ನಡೆಸಿದಾಗ ಸನ್ನಿಧಾನದ ಅಭಿವೃದ್ಧಿಗೆ ತೊಡಕಾಗಿರುವ ಬ್ರಹ್ಮರಾಕ್ಷಸನಿಗೆ ಮೋಕ್ಷವಾಗುವ ತನಕ ಆತನಿಂದ ಊರಿನಲ್ಲಿ ವಿಘ್ನಗಳು ಕಾಣಿಸಿಕೊಳ್ಳಬಹುದಾದ ಕಾರಣಕ್ಕಾಗಿ ಆತನನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಕೊಡುವಂತೆ ಚಿಂತನೆಯಲ್ಲಿ ಕಂಡು ಬಂದುದರಿಂದ ಈಗಾಗಲೇ ಕಾರ್ಯವನ್ನು ಮುಗಿಸಿ ಬ್ರಹ್ಮರಾಕ್ಷಸನ ಪ್ರತಿಷ್ಠಾಪನೆಯಾಗಿರುತ್ತದೆ. ಕ್ಷೇತ್ರಕ್ಕೆ ಸಂಬಂಧಿಸಿದ ದೈವಗಳಿಗೆ ಗುಡಿ ಕಟ್ಟಿ ಕಾಲ ಕಾಲಕ್ಕೆ ನೇಮಗಳನ್ನು ಕೊಡಲಾಗುತ್ತಿದ್ದು, ಸದ್ಯವೇ ಶ್ರೀ ದೇವರ ಬಿಂಬಕ್ಕೆ ಬೆಳ್ಳಿಯ ಕವಚವನ್ನು ಮತ್ತು ದೈವಗಳ ಭಂಡಾರಕ್ಕೆ ಪಲ್ಲಕ್ಕಿಯನ್ನು ಸಮರ್ಪಿಸಲಾಗುತ್ತದೆ. ಸುಂದರ ಆಲಯದೊಳಗೆ ಮಯೂರವಾಹನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ನೆಲೆಸಿದ್ದಾನೆಂಬ ನಂಬಿಕೆಯಿಂದ ಭಕ್ತರು ನಡೆದುಕೊಳ್ಳುತ್ತಿದ್ದಾರೆ. ನಂಬಿದ ಭಕ್ತರ ಕೈಬಿಡದ ದೇವರೆಂಬ ಖ್ಯಾತಿಯಿದೆ.
ಮತ್ತೆ ನಡೆಯಲಿದೆ ವಿಜೃಂಭಣೆಯ ಬ್ರಹ್ಮಕಲಶೋತ್ಸವ :
ಪುತ್ತೂರಿನ ಉಪ್ಪಿನಂಗಡಿ ಪದಾಳ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.18ರಿಂದ ಡಿ.23ರವರೆಗೆ ಅಷ್ಟಬಂಧ ಬ್ರಹ್ಮಕಲಶೋತ್ಸವವು ನಡೆಯಲಿದ್ದು, ಇದಕ್ಕೆ ಪೂರ್ವಭಾವಿಯಾಗಿ ದೇವಾಲಯದಲ್ಲಿ ಚಪ್ಪರ ಮುಹೂರ್ತ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಕೇಶವರಾಜ ಭಟ್ ಧಾರ್ಮಿಕ ವಿಧಿ-ವಿಧಾನ ನೆರವೇರಿಸಿದರು.
ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ನಡುಸಾರು ಉದಯಶಂಕರ ಭಟ್ಟ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಜಗದೀಶ ರಾವ್ ಮಣಿಕ್ಕಳ ಚಪ್ಪರ ಮುಹೂರ್ತ ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಸಮಿತಿಯ ಉಪಾಧ್ಯಕ್ಷ ಸುರೇಶ್ ಅತ್ರಮಜಲು, ಕಾರ್ಯದರ್ಶಿ ಕೇಶವ ಗೌಡ ರಂಗಾಜೆ, ಕೋಶಾಧಿಕಾರಿ ರಾಮಚಂದ್ರ ಮಣಿಯಾಣಿ ನೆಡ್ಚಿಲು, ಸದಸ್ಯರಾದ ಶಾಂಭವಿ ರೈ ಪುಳಿತ್ತಡಿ, ಹರೀಶ್ವರ ಮೊಗ್ರಾಲ್, ಶಂಕರನಾರಾಯಣ ಭಟ್ ಬೊಳ್ಳಾವು, ಸದಾನಂದ ಶೆಟ್ಟಿಕಿಂಡೋವು, ಜತ್ತಪ್ಪನಾಯ್ಕ ಬೊಳ್ಳಾವು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಜಯಗೋವಿಂದ ಶರ್ಮಾ ಪದಾಳ, ಜೊತೆ ಕಾರ್ಯದರ್ಶಿ ಸುರೇಶ್ ಗೌಂಡತ್ತಿಗೆ, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಗಿರೀಶ್ ಆರ್ತಿಲ, ಸುನೀಲ್ ಕುಮಾರ್ ದಡ್ಡು, ವಸಂತ ನಾಯ್ಕ ಬೊಳ್ಳಾವು, ಧರ್ನಪ್ಪ ನಾಯ್ಕ ಬೊಳ್ಳಾವು, ಪ್ರಶಾಂತ್ ಪೆರಿಯಡ್ಕ, ಕಂಗ್ವೆ ವಿಶ್ವನಾಥ ಶೆಟ್ಟಿ, ವಸಂತ ಕುಕ್ಕುಜೆ, ವೀರಪ್ಪಗೌಡಪುಳಿತ್ತಡಿ, ರಾಧಾಕೃಷ್ಣ ಭಟ್ ಬೊಳ್ಳಾವು, ಮಹಾಲಿಂಗೇಶ್ವರ ಭಟ್ ಮಧುವನ, ರಘು ಪೂಜಾರಿ, ಜಯಂತ ಪೊರೋಳಿ, ರಾಮಚಂದ್ರ ಭಟ್ ಕಲ್ಲಾಜೆ, ವೆಂಕಟ್ರಮಣ ಭಟ್ ಮುಂಚಿಕ್ಕಾನ ಮತ್ತಿತರರು ಉಪಸ್ಥಿತರಿದ್ದರು.