ಭಾರತವು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಉತ್ತೇಜನ ನೀಡುತ್ತಿದೆ. ಈಗಾಗಲೇ ಅನೇಕ ಸ್ಟಾರ್ಟ್ಅಪ್ಗಳು ಭಾರತದಲ್ಲಿ ಹುಟ್ಟಿಕೊಂಡು ವಿವಿಧ ವೈಶಿಷ್ಟ್ಯತೆಗಳುಳ್ಳ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿವೆ. ಮಾತ್ರವಲ್ಲದೆ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇತ್ತ ಕರ್ನಾಟಕದಲ್ಲೂ, ಅದರಲ್ಲೂ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತಿದೆ. ಅತ್ತ ಪೆಟ್ರೋಲ್, ಡೀಸೆಲ್ ವಾಹನಗಳು ಮೂಲೆ ಸರಿಯುತ್ತಿವೆ.
ಇದರ ನಡುವೆ ಅನೇಕರಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕೆಂಬ ಹಂಬಲವಿದೆ. ಆದರೆ ಸ್ಕೂಟರ್ಗಳ ಕೈಗೆಟಕದ ಬೆಲೆಯಿಂದಾಗಿ ಹಿಂದೆ ಸರಿಯುತ್ತಿದ್ದಾರೆ. ಆದರೀಗ ಅಂತವರಿಗಾಗಿ ಇಂಧನ ಬಳಕೆಯ ಸ್ಕೂಟರ್ಗಳನ್ನೇ ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುವ ಅವಕಾಶವನ್ನು ಬೆಂಗಳೂರು ಮೂಲದ ಸ್ಟಾರ್ಟ್ಅಪ್ ತೆರೆದಿಟ್ಟಿದೆ. ಆ ಮೂಲಕ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲಾಗದವರು ತಮ್ಮ ಇಂಧನ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿಸಬಹುದಾಗಿದೆ.
ಸ್ಟಾರ್ಯಾ ಎಂಬ ಕಂಪನಿ ಇಂಧನ ಬಳಕೆಯ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ. ಅಂದಹಾಗೆಯೇ ಬೆಂಗಳೂರು ಮೂಲದ ಈ ಕಂಪನಿ 2018 ಜುಲೈ ತಿಂಗಳಲ್ಲಿ ಪ್ರಾರಂಭಗೊಂಡಿದೆ. CEO ರವಿಕುಮಾರ್ ಜಗನ್ನಾಥ್ ಇದನ್ನು ಮುನ್ನಡೆಸುತ್ತಿದ್ದಾರೆ.
ಸ್ಟಾರ್ಯಾ ಸ್ವದೇಶಿ ಎಲೆಕ್ಟ್ರಿಕ್ ಪ್ರೊಪಲ್ಷನ್ ರೆಟ್ರೋಫಿಟ್ ಕಿಟ್ ಬಳಸಿ ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ. ಇದರ ಮೂಲಕ ಸ್ಕೂಟರ್ ಗರಿಷ್ಠ 6-6.5 ಕಿಲೋ ವ್ಯಾಟ್ ಶಕ್ತಿಯನ್ನು ಉತ್ಪಾದಿಸುತ್ತದೆ. ಗಂಟೆಗೆ ಸ್ಕೂಟರ್ 85 ಕಿಲೋ ಮೀಟರ್ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಸ್ಟಾರ್ಯಾ ಪರಿವರ್ತಿತ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ 185 ನ್ಯೂಟನ್ ಮೀಟರ್ಗಳ ಟಾರ್ಕ್ ಪಡೆಯಬಹುದಾಗಿದೆ. ಇದರಲ್ಲಿ 51 ವೋಲ್ಟ್ಗಳ ಬ್ಯಾಟರಿಯನ್ನು ಬಳಸಲಾಗುತ್ತಿದೆ. ಸಮತಟ್ಟಾದ ರಸ್ತೆಯಲ್ಲಿ ಗಂಟೆಗೆ 85 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದಾಗಿದೆ.
ಅಂದಹಾಗೆಯೇ ಸ್ಟಾರ್ಯಾ ತಂತ್ರಜ್ಞಾನ ವಿಚಾರದಲ್ಲಿ 4 ಪೇಟೆಂಟ್ ಪಡೆದಿದೆ. ಸ್ಕೂಟರ್ ಸವಾರಿಯ ಇತಿಹಾಸ, ಮೈಲೇಜ್, ಪವರ್ ಮುಂತಾದ ಮಾಹಿತಿಯನ್ನು ಟ್ರ್ಯಾಕ್ ಮಾಡುವ ಅಪ್ಲಿಕೇಷನ್ಸ್ ಅಭಿವೃದ್ಧಿ ಪಡಿಸಿದೆ.
ಇನ್ನು ಸ್ಟಾರ್ಯಾ ಕಂಪನಿಯ ಕಾರ್ಯವನ್ನು ಆಟೋಮೋಟಿವ್ ರಿಸರ್ಚ್ ಆಸೋಸಿಯೇಷನ್ ಆಫ್ ಇಂಡಿಯಾ ಅನುಮೋದಿಸಿದೆ. ಹಳೆಯ ಬಜಾಜ್ ಚೇತಕ್, ಹೋಂಡಾ ಕೈನೆಟಿಕ್ನಂತಹ ವಾಹನಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಪರಿವರ್ತಿಸುತ್ತಿದೆ.
ಗ್ರಾಹಕರು ತಮ್ಮ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರನ್ನಾಗಿ ಮಾರ್ಪಡಿಸಲು 90 ಸಾವಿರ ಖರ್ಚು ಮಾಡಬೇಕಿದೆ. ಅಥವಾ ಶೇ.40ರಷ್ಟು ಹಣವನ್ನು ಪಾವತಿಸಿ ಕೂಡ ಎಲೆಕ್ಟ್ರಿಕ್ ವಾಹನವನ್ನಾಗಿ ಪರಿವರ್ತಿಸುವ ಆಯ್ಕೆಯನ್ನು ನೀಡಿದೆ.