ಚಿಕ್ಕಮಗಳೂರು: ಹೆತ್ತ ತಾಯಿಯನ್ನ ಪಾಪಿ ಮಗನೇ ಕೊಚ್ಚಿ ಕೊಂದು ತಾಯಿಯ ಮೃತದೇಹದೊಂದಿಗೆ 3 ಗಂಟೆಗಳ ಕಾಲ ಒಬ್ಬನೇ ಕೂತ ಘಟನೆ ಚಿಕ್ಕಮಗಳೂರು ನಗರದ ಗೌರಿ ಕಾಲುವೆ ಬಡಾವಣೆಯಲ್ಲಿ ನಡೆದಿದೆ.
ಮೃತ ದುರ್ದೈವಿ 48 ವರ್ಷದ ಸುಧಾ ಎಂದು ಗುರುತಿಸಲಾಗಿದೆ. ತನ್ನ ಹೆತ್ತವಳನ್ನೆ ಕೊಂದ ಪಾಪಿ ಪುತ್ರ 28 ವರ್ಷದ ದುಶ್ಯಂತನನ್ನ ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ : ಮೃತ ಸುಧಾ ಪತಿ ಕೆಲ ವರ್ಷಗಳ ಹಿಂದೆ ಅಪಘಾತದಿಂದ ಸಾವನ್ನಪ್ಪಿದ್ದರು. ಅಂದಿನಿಂದ ಇಬ್ಬರು ಮಕ್ಕಳನ್ನು ಸುಧಾ ನೋಡಿಕೊಳ್ಳುತ್ತಿದ್ದರು.
ನಗರದ ದಿನಸಿ ಅಂಗಡಿಯೊಂದಕ್ಕೆ ರೇಷನ್ ಸಾಮಾಗ್ರಿಗಳನ್ನ ಪ್ಯಾಕ್ ಮಾಡುವ ಕೆಲಸಕ್ಕೆ ಹೋಗುತ್ತಲೇ ಮಕ್ಕಳನ್ನ ಸಾಕಿ ಬೆಳೆಸಿದ್ದರು.
ಹೆತ್ತ ತಾಯಿಯನ್ನೇ ಕೊಂದ ದುಶ್ಯಂತನಿಗೆ ಮನೆಯವರನ್ನ ಕಂಡರೆ ತುಂಬಾ ಸಿಟ್ಟು, ರೇಗಾಡುತ್ತಿದ್ದ ಆದರೆ ಅಕ್ಕ-ಪಕ್ಕದವರು, ಬೇರೆಯವರು ಮಾತನಾಡಿಸಿದರೆ ತುಂಬಾ ಚೆನ್ನಾಗಿ ವರ್ತಿಸುತ್ತಿದ್ದ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಳೆದ ವಾರದ ಹಿಂದಷ್ಟೆ ಮನೆಯಲ್ಲಿ ಸ್ವಲ್ಪ ಕೂಗಾಡುತ್ತಿದ್ದ. ಸ್ಥಳೀಯರು ಹೋಗಿ ಅವನನ್ನ ಎಲ್ಲಿಗಾದ್ರು ಸೇರಿಸಿ ಎಂದು ಸಲಹೆ ನೀಡಿದ್ದರು. ಅದಕ್ಕೆ ಮೃತ ಸುಧಾ ಅವನನ್ನ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತೇನೆ. ಸರಿಯಾಗುತ್ತಾನೆ ಎಂದು ಹೇಳಿದ್ದರಂತೆ.
ಆದರೆ, ನಿನ್ನೆ ಮಧ್ಯಾಹ್ನ ದುಷ್ಯಂತ ತನ್ನ ತಾಯಿಯನ್ನೇ ಕೊಂದು ಸುಮಾರು 3 ಗಂಟೆಗಳ ಕಾಲ ಮೃತದೇಹದ ಪಕ್ಕ ಒಬ್ಬನೇ ಕೂತಿದ್ದಾನೆ.
ಸಂಜೆ 5.45 ರ ಸುಮಾರಿಗೆ ಮೃತ ಸುಧಾರವರ ಕಿರಿಯ ಪುತ್ರ ಸಂತೋಷ್ ಮನೆಗೆ ಬಂದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ. ಸಂಜೆ ಮನೆಯಲ್ಲಿ ಚೀರಾಟದ ಶಬ್ಧ ಕೇಳಿ ಬಂದಿದೆ.
ಸ್ಥಳೀಯರು ಹೋಗಿ ನೋಡಿದಾಗ ಸುಧಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹೆತ್ತ ತಾಯಿ ಮೇಲೆ ಮಗನೇ ಹಲ್ಲೆ ಮಾಡುವಾಗ ಸುಧಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ.
ಮನೆಯ ಕರ್ಟನ್‍ಗಳನ್ನ ಎಳೆದು ಹಾಕಿದ್ದಾರೆ. ಬಾಗಿಲ ಮೇಲೆ ರಕ್ತದ ಕಲೆ ಇದೆ. ತಲೆ, ಕಿವಿ, ಕಣ್ಣು, ಬಾಯಿಗೆ ಬಲವಾದ ಏಟು ಬಿದ್ದಿದೆ. ಯಾವ ಆಯುಧದಿಂದ ಹಲ್ಲೆ ಮಾಡಿದ್ದಾನೆಂದು ಸ್ಥಳೀಯರು, ಪೊಲೀಸರು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ.
ಕೊಲೆ ಮಾಡಿ ಹೆಣದ ಜೊತೆಯೇ ಇದ್ದ ದುಶ್ಯಂತ ಸ್ಥಳೀಯರು ಹೋದ ಕೂಡಲೇ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನ ನೋಡಿದ ಕೂಡಲೇ ಮೃತ ಸುಧಾ ಕಿರಿಯ ಮಗ ಸಂತೋಷ್ ಕೂಗಿಕೊಂಡು ಬಿದ್ದಿದ್ದಾನೆ.
ಕೂಡಲೇ ಸ್ಥಳೀಯರು ಹೋಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಬಸವನಹಳ್ಳಿ ಪೊಲೀಸರು ಆರೋಪಿ ದುಶ್ಯಂತನನ್ನ ವಶಕ್ಕೆ ಪಡೆದಿದ್ದಾರೆ. ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.