ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ ಮಾಡಲಾದ ಘಟನೆ ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಕಲಬುರಗಿ : ಹಾಡುಹಗಲೇ ಸಾಮಾಜಿಕ ಕಾರ್ಯಕರ್ತೆಯ ಭೀಕರ ಹತ್ಯೆ ಮಾಡಲಾದ ಘಟನೆ ಕಲಬುರಗಿಯ ಹಾಗರಗಾ ಕ್ರಾಸ್ ಬಳಿ ನಡೆದಿದೆ. ಮಜತ್ ಸುಲ್ತಾನ್ (35) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಮಜತ್ ಸುಲ್ತಾನ್ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಢಿಕ್ಕಿ ಹೊಡೆದು, ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿ ದುಷ್ಕರ್ಮಿಗಳು ಬಳಿಕ ಪರಾರಿಯಾಗಿದ್ದಾರೆ.
ನಗರದ ಜಂಜಂ ಕಾಲೋನಿ ನಿವಾಸಿಯಾಗಿದ್ದ ಮಜತ್ ಸುಲ್ತಾನ್, ಸಾಮಾಜಿಕ ಕಾರ್ಯಕರ್ತೆ ಹಾಗೂ ನ್ಯಾಯವಾದಿಯಾಗಿ ಕೆಲಸ ಮಾಡುತ್ತಿದ್ದರು.
ಆಸ್ತಿಯ ವಿಚಾರವಾಗಿ ಅಜೀಮ್ ಗೌಂಡಿ, ವಸೀಮ್ ಗೌಂಡಿ, ನಯೀಮ್ ಮತ್ತು ನದೀಮ್ ಸೇರಿ ಕೊಲೆ ಮಾಡಿದ್ದಾರೆಂದು ಕೊಲೆಯಾದ ಮಜತ್ ಸುಲ್ತಾನ್ ಪತಿ ಸದ್ದಾಂ ಆರೋಪ ಮಾಡಿದ್ದಾರೆ.
ನಯೀಮ್ ಮತ್ತು ನದೀಮ್ ಇಬ್ಬರು ಕೊಲೆಯಾದ ಮಹಿಳೆ ಪತಿ ಸದ್ದಾಂನ ಸಹೋದರರಾಗಿದ್ದು ಈ ಹಿಂದೆ ಆಸ್ತಿ ವಿಚಾರದಲ್ಲಿ ಕಲಹ ನಡೆದಿತ್ತೆನ್ನಲಾಗಿದೆ.
ಸದ್ಯ ಸ್ಥಳಕ್ಕೆ ಪೊಲೀಸ್ ಕಮಿಷನರ್ ಚೇತನ್ ಆರ್, ಡಿಸಿಪಿ ಆಡೂರು ಶ್ರೀನಿವಾಸಲು ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಶ್ವಾನದಳ, ಬೆರಳಚ್ಚು ತಂಡದವರು ಸಹ ಆಗಮಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.