ನವದೆಹಲಿ : 2023 ರ ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಅಧಿವೇಶನಕ್ಕೆ ನುಗ್ಗಿ ಆತಂಕ ಸೃಷ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಪಾರ್ಲಿಮೆಂಟ್ ಒಳಕ್ಕೆ ನುಗ್ಗಿದ್ದ ಇಬ್ಬರು ಯುವಕರು ಘೋಷಣೆ ಕೂಗಿ ಕೈನಲ್ಲಿ ಸ್ಮೋಕ್ ಬಾಂ*ಬ್ ಹಿಡಿದು ಆತಂಕ ಸೃಷ್ಟಿ ಮಾಡಿದ್ದರು.
ಇದೇ ವೇಳೆ ಪಾರ್ಲಿಮೆಂಟ್ ಹೊರಗೆ ಕೂಡ ಒಂದು ಯುವತಿ ಹಾಗೂ ಮೂವರು ಯುವಕರು ಇದೇ ರೀತಿ ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಮೈಸೂರು ಮೂಲದ ಮನೋರಂಜನ್ ಎಂಬ ಯುವಕನೂ ಭಾಗಿಯಾಗಿದ್ದು, ಸಂಸದ ಪ್ರತಾಪ್ ಸಿಂಹ ಅವರ ಪಿಎ ಅವರಿಂದ ಪಾಸ್ ಪಡೆದುಕೊಂಡಿದ್ದ.
ಪನ್ನುನ್ ನೀಡಿದ್ದ ಹೇಳಿಕ ಹಂಚಿಕೊಂಡಿದ್ದ ಆರೋಪಿಗಳು :
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಚಾರ್ಜ್ ಶೀಟ್‌ನಲ್ಲಿ ಈ ಆರೋಪಿಗಳಿಗೆ ಖಲಿಸ್ಥಾನ ಹೋರಾಟಗಾರರ ಜೊತೆ ಸಂಪರ್ಕ ಇರುವುದಾಗಿ ಅನುಮಾನ ವ್ಯಕ್ತಪಡಿಸಲಾಗಿದೆ. ಖಾಲಿಸ್ತಾನ ಹೋರಾಟದ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ನೀಡಿದ್ದ ಹೇಳಿಕೆಯೊಂದನ್ನು ಆರೋಪಿಗಳು ಹಂಚಿಕೊಂಡಿದ್ದೇ ಈ ಅನುಮಾನಕ್ಕೆ ಕಾರಣವಾಗಿದೆ.
“ಭಾರತದ ಪಾರ್ಲಿಮೆಂಟ್ ಅಲ್ಲಾಡಿಸಲಾಗುವುದು” ಎಂದು ಹೇಳಿಕೆ ನೀಡಿದ್ದ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯನ್ನು ಆರೋಪಿಗಳು ಹಂಚಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ.
ಪ್ರಮುಖ ಆರೋಪಿಯಾಗಿರುವ ಮೈಸೂರಿನ ಮನೋರಂಜನ್ ಮೊಬೈಲ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯ ವಿಡಿಯೋ ಲಿಂಕ್ ಪೊಲೀಸರಿಗೆ ಸಿಕ್ಕಿದೆ. ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ದೆಹಲಿ ಪೊಲೀಸರು, ಈ ಪ್ರಕರಣದಲ್ಲಿ ಆರೋಪಿಯ ಮೊಬೈಲ್‌ನಲ್ಲಿ ಗುರುಪತ್‌ವಂತ್ ಸಿಂಗ್ ಪನ್ನುನ್ ಹೇಳಿಕೆಯ ವಿಡಿಯೋ ಲಿಂಕ್ ಸಿಕ್ಕಿರುವುದನ್ನು ಚಾರ್ಜ್ ಶೀಟ್‌ನಲ್ಲಿ ನಮೂದಿಸಲಾಗಿದೆ.
ಈ ವೀಡಿಯೋವನ್ನು ಸಾಕಷ್ಟು ಜನರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳಿಗೂ ಈ ಹೇಳಿಕೆಗೂ ಸಂಬಂಧ ಇರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಇನ್ನಷ್ಟು ವಿಚಾರಣೆ ನಡೆಸಿ ಸಪ್ಲಿಮೆಂಟರಿ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಚಾರ್ಜ್ ಶೀಟ್‌ನಲ್ಲಿ ಉಲ್ಲೇಖ ಇರುವ ಪ್ರಮುಖ ವಿಚಾರ :
ಚಾರ್ಜ್ ಶೀಟ್‌ನಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಹೆಸರೂ ಕೂಡಾ ಉಲ್ಲೇಖಿಸಲಾಗಿದ್ದು, ಪಾಸ್ ಅವರ ಹೆಸರಿನಲ್ಲಿ ಪಡೆದುಕೊಂಡಿರುವುದನ್ನು ದೆಹಲಿ ಪೊಲೀಸರು ಖಚಿತ ಪಡಿಸಿದ್ದಾರೆ.
ಪಾರ್ಲಿಮೆಂಟ್ ಒಳಗೆ ನುಸುಳಿದ್ದ ಸಾಗರ್ ಶರ್ಮಾ ಹಾಗೂ ಮನೋರಂಜನ್ ಅವರು ಧರಿಸಿದ್ದ ಶೂ ಎರಡು ಲೇಯರ್‌ನ ಸೋಲ್ ಹೊಂದಿದ್ದು, ಅದರ ನಡುವೆ ಸ್ಮೋಕ್ ಬಾಂಬ್ ಇರಿಸಿದ್ದರು. ಹೀಗಾಗಿ ಭದ್ರತಾ ಸಿಬ್ಬಂದಿಯ ಗಮನಕ್ಕೆ ಬಾರದೆ ಅವರ ಅಮಾನತು ಆಗಿತ್ತು.
ಇದನ್ನೂ ಓದಿ : ಬಿಳಿ ಅಕ್ಕಿ vs ಕೆಂಪಕ್ಕಿ: ನಿಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು
ಸಾಗರ್ ಶರ್ಮಾ ಹಾಗೂ ಮನೋರಂಜನ್ ಇಬ್ಬರೂ ಕಳೆದ ಐದು ವರ್ಷಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದಾರೆ. ಉಳಿದವರು ಕೇವಲ ಒಂದು ವರ್ಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪರಿಚಿತರಾಗಿದ್ದಾರೆ. ಆರೋಪಿಗಳ ಲ್ಯಾಪ್‌ಟಾಪ್ ಮೊಬೈಲ್ ನ ಎಫ್‌ಎಸ್‌ಎಲ್ ವರದಿ ಬಂದಿದ್ದು, ಅದನ್ನೂ ಸಪ್ಲಿಮೆಂಟರಿ ಚಾರ್ಜ್ ಶೀಟ್‌ನಲ್ಲಿ ನಮೂದಿಸಲಾಗುವುದು ಎಂದು ಹೇಳಲಾಗಿದೆ.
ಅರೋಪಿಗಳಾದ ಮನೋರಂಜನ್ ಹಾಗೂ ಯುವತಿ ನೀಲಂ ಪದವೀಧರರಾಗಿದ್ದು ಮಿಡ್ಲ್ ಕ್ಲಾಸ್ ಕುಟುಂಬದಿಂದ ಬಂದವರಾಗಿದ್ದಾರೆ. ಉಳಿದ ನಾಲ್ವರು ಆರೋಪಿಗಳು ಹತ್ತನೆ ತರಗತಿ ಪಾಸ್ ಆದವರಾಗಿದ್ದು, ಬಿಪಿಎಲ್ ಕುಟುಂಬದವರು ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.