ನವದೆಹಲಿ: ‘ದೇಶದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧವು ಜುಲೈ 1 ರಿಂದ ಕಟ್ಟುನಿಟ್ಟಾಗಿ ಜಾರಿಗೆ ಬಂದಿದೆ. ಈ ಆದೇಶ ಮೀರಿ ಪ್ಲಾಸ್ಟಿಕ್ ಉತ್ಪಾದಿಸಿ ಅದನ್ನು ಸರಬರಾಜು ಮಾಡುವ ಮತ್ತು ದಾಸ್ತಾನು ಇಡುವುದು ಕಂಡುಬಂದರೆ ಅಂತಹ ಘಟಕಗಳನ್ನು ಮುಚ್ಚಲಾಗುತ್ತದೆ’ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
‘ನಿಷೇಧ ಆದೇಶವನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಕೇಂದ್ರ ಹಾಗೂ ರಾಜ್ಯಗಳ ಹಂತದಲ್ಲಿ ನಿಯಂತ್ರಣ ಕೊಠಡಿಗಳನ್ನು ಆರಂಭಿಸಲಾಗಿದೆ.
ಅನಧಿಕೃತವಾಗಿ ಪ್ಲಾಸ್ಟಿಕ್ ಉತ್ಪಾದಿಸುವ, ಸರಬರಾಜು ಮಾಡುವ ಹಾಗೂ ದಾಸ್ತಾನು ಇರಿಸಿಕೊಂಡು ಮಾರಾಟ ಮಾಡುವವರನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
‘ನಿಷೇಧಿಸಲ್ಪಟ್ಟ ಪ್ಲಾಸ್ಟಿಕ್ ಅನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಣೆ ಮಾಡುವುದನ್ನು ತಪ್ಪಿಸುವ ಸಲುವಾಗಿ ಗಡಿ ಭಾಗದಲ್ಲಿ ತಪಾಸಣಾ ಕೇಂದ್ರಗಳನ್ನು ಆರಂಭಿಸುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ. ಆದೇಶ ಉಲ್ಲಂಘಿಸುವವರಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶ ಇದೆ.
2021ರಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು 2022ರಿಂದ 19 ರೀತಿಯ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸುವ ಆದೇಶ ಹೊರಡಿಸಿತ್ತು.
ಅದರ ಪ್ರಕಾರ ಪ್ಲಾಸ್ಟಿಕ್ ಕಟ್ಲರಿಗಳು, ಸ್ಟ್ರಾಗಳು, ಕಲಕುವ ಕಡ್ಡಿಗಳು, ಚಾಕಲೇಟ್‌ಗಳಲ್ಲಿ ಬಳಸುವ ಪ್ಲಾಸ್ಟಿಕ್ ಕಡ್ಡಿಗಳು, ಪ್ಲಾಸ್ಟಿಕ್ ಬಲೂನ್‌ಗಳು, ಪ್ಲಾಸ್ಟಿಕ್ ಸ್ವೀಟ್ ಬಾಕ್ಸ್‌ಗಳು,
ಇಯರ್ ಬಡ್‌ಗಳು, ಪ್ಯಾಕೇಜಿಂಗ್‌ಗೆ ಬಳಸುವ ತೆಳುವಾದ ಪ್ಲಾಸ್ಟಿಕ್ ಹಾಗೂ ಅಲಂಕಾರಕ್ಕೆ ಬಳಸುವ ಪಾಲಿಸ್ಟಿರೀನ್ ಮುಂತಾದವು ಜು.1ರಿಂದ ನಿಷೇಧವಾಗಲಿವೆ.
ಜು.1ರಿಂದ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ನಿಯಮ ಉಲ್ಲಂಘಿಸಿದರೆ 1986ರ ಪರಿಸರ ಸಂರಕ್ಷಣೆ ಕಾಯ್ದೆಯಡಿ ಐದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ 1 ಲಕ್ಷ ರು.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.
ಅಲ್ಲದೆ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಮುನ್ಸಿಪಾಲಿಟಿಗಳು ಹೊಂದಿರುವ ಬೇರೆ ಬೇರೆ ನಿಯಮಗಳಡಿ ಮತ್ತು ಇನ್ನಿತರ ಕೆಲ ದಂಡಸಂಹಿತೆಗಳ ಅಡಿಯಲ್ಲೂ ಶಿಕ್ಷೆ ವಿಧಿಸಲು ಸಾಧ್ಯವಿದೆ.