Wednesday, May 31, 2023

ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ..!

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆವರು ಜಿನೈಕ್ಯರಾಗಿದ್ದಾರೆ.

ಹಾಸನ : ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆವರು ಜಿನೈಕ್ಯರಾಗಿದ್ದಾರೆ. 

ಅವರಿಗೆ 73 ವರ್ಷ ವಯಸ್ಸಾಗಿತ್ತು. ಸ್ವಾಮೀಜಿಯವರು ಕೆಲಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಶ್ರವಣಬೆಳಗೊಳದ ಮಠದಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು.

ಪ್ರಾಚೀನ ಧರ್ಮಪೀಠದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಅಂತಿಮ ದರ್ಶನಕ್ಕೆ ಅಪಾರ ಭಕ್ತರು ಆಗಮಿಸಲಿದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಐದು ದಶಕಗಳ ಕಾಲ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಅಹಿಂಸೆ, ತ್ಯಾಗ ಹಾಗೂ ಶಾಂತಿಯಿಂದ ಜೈನ ಪರಂಪರೆಯನ್ನು ಬೆಳಗಿದ್ದರು.

1949ರ ಮೇ 3ರಂದು ಜನಿಸಿದ ಶ್ರೀಗಳು, 1970ರಲ್ಲಿ ಮಠದ ಪೀಠಾಧಿಪತಿಗಳಾಗಿ ನೇಮಕಗೊಂಡಿದ್ದರು.

ಮೂಲತಃ ಕಾರ್ಕಳದ ವರಂಗ ಗ್ರಾಮದವರು ಅವರ ಪೂರ್ವಾಶ್ರಮದ ಹೆಸರು ರತ್ನವರ್ಮ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅವರು ಬಳಿಕ ಮೈಸೂರು ಯೂನಿವರ್ಸಿಟಿಯಲ್ಲಿ ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಇಷ್ಟೇ ಅಲ್ಲದೇ ಚಾರುಕೀರ್ತಿ ಭಟ್ಟಾರಕ ಶ್ರೀಗಳು ಪ್ರಾಕೃತ, ಸಂಸ್ಕೃತ ಹಾಗೂ ಕನ್ನಡ ಭಾಷೆಯಲ್ಲಿ ಪರಿಣತಿ ಹೊಂದಿದ್ದರು.

ಸ್ವಸ್ಥಿ ಶ್ರಿ ಚಾರುಕೀರ್ತಿ ಎನ್ನುವ ಬಿರುದಾಂಕಿತ ಜೈನಭಟ್ಟಾರಕ ಶ್ರೀಗಳಿಗೆ ದೇಶಾದ್ಯಂತ ಅಪಾರ ಭಕ್ತವರ್ಗವಿದೆ.

ಶಿಕ್ಷಣಕ್ಕೆ ಆದ್ಯತೆ ನೀಡಿದ್ದ ಶ್ರೀಗಳು ಪಾಲಿಟೆಕ್ನಿಕ್, ಇಂಜಿನಿಯರಿಂಗ್, ನರ್ಸಿಂಗ್, ಪ್ರಾಕೃತ ವಿವಿ ಸ್ಥಾಪನೆ ಮಾಡಿದ್ದರು. ಅಲ್ಲದೇ ನೂರಾರು ಜೈನ‌ ದೇವಾಲಯ ಪುನರುಜ್ಜೀವನ ಗೊಳಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

12 ವರ್ಷ ವಾಹನ ಸಂಚಾರವನ್ನೇ ಮಾಡದೆ ದವಳ ಮತ್ತು ಜಯದವಳ ಆಗಮ ಗ್ರಂಥ ರಚನೆ ಮಾಡಿದ್ದ ಶ್ರೀಗಳು, ಇದುವರೆಗೆ ಮೊಬೈಲ್ ಬಳಕೆ ಮಾಡಿಲ್ಲ ಎಂಬುವುದು ಮತ್ತೊಂದು ವಿಶೇಷ.

 

ಇನ್ನು ಚಾರುಕೀರ್ತಿ ಭಟ್ಟಾರಕ ಶ್ರೀಗಳು 1981ರ ಮಹಾಮಸ್ತಕಾಭಿಷೇಕ ಯಶಸ್ವಿಯಾಗಿ ನೆರವೇರಿಸಿದ್ದಕ್ಕೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ ಕರ್ಮಯೋಗಿ ಎಂಬ ಬಿರುದೂ ಪಡೆದಿದ್ದರು.

ಶ್ರವಣ ಬೆಳಗೊಳದಲ್ಲಿ ನಡೆದ ನಾಲ್ಕು ಮಹಾಮಸ್ತಕಾಭಿಷೇಕ ಇವರ ಸುಪರ್ದಿಯಲ್ಲಿ ನೆರವೇರಿತ್ತು ಎಂಬುವುದು ಉಲ್ಲೇಖನೀಯ.

ಅವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯ ಸಭಾ ಸದಸ್ಯ ಡಾ. ಡಿ. ವೀರೇದ್ರ ಹೆಗ್ಗಡೆ, ಮಾಜಿ ಸಚಿವ ಹಾಗೂ ಮೂಲ್ಕಿ ಮೂಡುಬಿದಿರೆ ಕ್ಷೇತ್ರದ ಮಾಜಿ ಶಾಸಕ ಆಭಯಚಂದ್ರ ಜೈನ್‌, ಮಂಗಳೂರಿನ ಮೂಡಾದ ಮಾಜಿ ಅಧ್ಯಕ್ಷ ಸುರೇಶ್‌ ಬಲ್ಲಾಳ್‌ ಮತ್ತು ಇತರರು ಸಂತಾಪ ವ್ಯಕ್ತ ಪಡಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics