ಮದುವೆ ಮನೆಯಲ್ಲಿ ಭಗ್ನ ಪ್ರೇಮಿಯಿಂದ ಗುಂಡಿನ ದಾಳಿ : ಕಂಗಾಲದ ವಧು ಕುಟುಂಬಕ್ಕೆ ಪೊಲೀಸ್ ಭದ್ರತೆ.!
ಕಾರವಾರ: ಮದುವೆ ಹೆಣ್ಣಿನ ಮನೆಯಲ್ಲಿ ಗುಂಡಿನ ದಾಳಿ ನಡೆದ ಘಟನೆ ನಸುಕಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದ ಸಕಲಬೇಣಾದಲ್ಲಿ ನಡೆದಿದೆ.
ರಾಮನಗುಳಿ ಯುವತಿ ವಿವಾಹ ಯಲ್ಲಾಪುರದ ವರನ ಜತೆ ಅವರ್ಸಾದ ಲಕ್ಷ್ಮೀನಾರಾಯಣ ಸಭಾಭವನದಲ್ಲಿ ನಡೆಯಬೇಕಿತ್ತು.
ಎರಡು ದಿನ ಮುಂಚಿತವಾಗಿ ವಧುವಿನ ಕಡೆಯವರು ಅವರ್ಸಾಕ್ಕೆ ಬಂದಿದ್ದು; ವಧುವಿನ ಚಿಕ್ಕಮ್ಮನ ಮನೆಯಲ್ಲಿ ಮದುವೆಗೆ ಎಲ್ಲಾ ಸಿದ್ಧತೆ ಮಾಡಲಾಗಿತ್ತು.
ಮದುವೆ ದಿನ ಬೆಳ್ಳಂಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ವಧು ಇದ್ದ ಮನೆಯ ಹೊರಭಾಗದಿಂದ ಆಗುಂತಕನೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ.
ಈ ಗುಂಡು ಮನೆಯ ಕಿಟಕಿ ಭಾಗದಲ್ಲಿ ತಾಗಿ ಮನೆಯೊಳಗೆ ಪ್ರವೇಶಿಸಿದೆ. ನಂತರ ಆತ ಪರಾರಿಯಾಗಿದ್ದಾನೆ.
ಕಳೆದ ಕೆಲ ದಿನಗಳಿಂದ ಈಕೆಯನ್ನು ಮದುವೆ ಆಗುವುದಾಗಿ ಪೀಡಿಸುತ್ತಿದ್ದ ರಾಜೇಶ ಗಾಂವಕರ ಎಂಬಾತನ ಮೇಲೆ ಮನೆಯವರು ಅನುಮಾನ ಪಟ್ಟಿದ್ದು, ಈತನೇ ಈ ಕೃತ್ಯ ಮಾಡಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಕಳೆದ ಐದಾರು ದಿನದ ಹಿಂದೆ ಈತ ಕಾಣೆಯಾಗಿರುವ ದೂರು ಕೂಡ ದಾಖಲಾಗಿದೆ. ಈತನು ವಧುವನ್ನು ಹಲವು ಬಾರಿ ಕಾಡಿಸುತ್ತಿದ್ದನೆಂದು ಸಂಬಂಧಿಗಳು ತಿಳಿಸಿದ್ದಾರೆ.
ಈ ನಡುವೆ ಗುಂಡಿನ ದಾಳಿಯಿಂದ ಬೆದರಿದ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಲಾಗಿತ್ತು. ಮದುವೆಯೂ ಪೊಲೀಸ್ ಬಂದೋಬಸ್ತ್ನಲ್ಲೇ ನೆರವೇರಿತು.
ಘಟನೆ ಸಂಬಂಧ ವಧುವಿನ ಕುಟುಂಬದವರು ಅಂಕೋಲಾಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಗುಂಡಿನ ದಾಳಿ ನಡೆದ ಸ್ಥಳಕ್ಕೆ ಮತ್ತು ಲಕ್ಷ್ಮೀನಾರಾಯಣ ಕಲ್ಯಾಣ ಮಂಟಪಕ್ಕೆ ಎಸ್ಪಿ ಶಿವಪ್ರಕಾಶ ದೇವರಾಜು ಭೇಟಿ ನೀಡಿ ಪರಿಶೀಲಿಸಿದ್ದಾರೆ.