ಕಾರವಾರ: ಶಿರೂರು ಭೂ ಕುಸಿತ ದುರಂತದ ಹಿನ್ನೆಲೆ ನಡೆಯುತ್ತಿದ್ದ ಮೂರನೇ ಹಂತದ ಡ್ರಜ್ಜಿಂಗ್ ಕಾರ್ಯಾಚರಣೆಯನ್ನು ಸ್ಥಗಿತಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಶಿರೂರು ಭೂ ಕುಸಿತದ ಹಿನ್ನೆಲೆ ಮೂರನೇ ಹಂತದ ಕಾರ್ಯಾಚರಣೆಯು ನಡೆಯುತ್ತಿತ್ತು. 13 ದಿನ ಪೂರೈಸಿದ ಡ್ರಜ್ಜಿಂಗ್ ಬೋಟ್ ಮೂಲಕ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಇಂದು ಸ್ಥಗಿತಮಾಡಲಾಗಿದೆ.
ಕಳೆದ 13 ದಿನದಿಂದ ಅಂಕೋಲದ ಗಂಗಾವಳಿ ನದಿಯಲ್ಲಿ ಓಷಿಯನ್ ಕಂಪನಿ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿತ್ತು. 90 ಲಕ್ಷದ ಮೊತ್ತದಲ್ಲಿ 13 ದಿನ ಕಾರ್ಯಾಚರಣೆ ಪೂರ್ಣಗೊಂಡಿದೆ. 13 ದಿನದ ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಅರ್ಜುನ್ ಶವ ಹಾಗೂ ಲಾರಿ ಹೊರತೆಗೆದಿದ್ದು, ನಂತರ ಮನುಷ್ಯನ ಮೂಳೆಗಳು ಹಾಗೂ ಕೆಲವು ವಸ್ತುಗಳನ್ನು ಸಹ ಹೊರತೆಗೆಯಲಾಗಿದೆ.
ಇದಾದ ಬಳಿಕ ಗಂಗಾವಳಿ ನದಿಯಲ್ಲಿ ಬಿದ್ದಿದ್ದ ಬೃಹತ್ ಆಲದ ಮರ ಹೊರತೆಗೆಯಲಾಗಿತ್ತು. ಆದರೆ ಇದೀಗ ಡ್ರಜ್ಜಿಂಗ್ ಕಾರ್ಯಾಚರಣೆ ಸ್ಥಗಿತ ಮಾಡಲು ನಿರ್ಧರಿಸಿದ್ದಾರೆ. ಇದರ ಬದಲಿಗೆ ಇಂದಿನಿಂದ ಇಬ್ಬರು ಮುಳುಗು ತಜ್ಞರು ಹಾಗೂ ಪೋಕ್ ಲೈನ್ ಮೂಲಕ ಹೋಟೆಲ್ ಕುಸಿದುಹೋದ ಸ್ಥಳದಲ್ಲಿ ನಿಗದಿ ಮಾಡಿದ ಎರಡನೇ ಪಾಯಂಟ್‌ನಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಭೂಕುಸಿತ ದುರಂತದಲ್ಲಿ ಸತತ 77 ದಿನದ ದೀರ್ಘ ಕಾರ್ಯಾಚರಣೆ ಇದಾಗಿದ್ದು, ಒಟ್ಟು ಮೂರು ಹಂತದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಸಿಕ್ಕ ಮೂಳೆಗಳ ಡಿ.ಎನ್.ಎ ವರದಿ ಬರಬೇಕಿದ್ದು, ಕಾಣೆಯಾದ ಜಗನ್ನಾಥ್, ಲೋಕೇಶ್ ಶವ ಶೋಧ ನಡೆಯಬೇಕಿದೆ.
ಬಂಟ್ವಾಳ: ಬ್ಯಾಂಕ್‌ಗೆ ಹೋಗಿ ಹಣ ಪಡೆದುಕೊಂಡು ಮನೆಗೆ ಬಂದ ಸಜೀಪ ಮುನ್ನೂರು ಗ್ರಾಮದ ನಾಗವಳಚ್ಚಿಲ್‌ನ ವೃದ್ಧರೊಬ್ಬರು ನ. 5ರಂದು ಮನೆಯಿಂದ ಹೊರ ಹೋದವರು ಮರಳಿ ಬಾರದೆ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ದಿನ ಉಳ್ಳಾಲದ ರೈಲು ಹಳಿಯಲ್ಲಿ ಪತ್ತೆಯಾದ ಮೃ*ತದೇಹ ಅವರದ್ದೇ ಎಂದು ತಡವಾಗಿ ಬೆಳಕಿಗೆ ಬಂದಿದೆ.
ಉಗ್ಗಪ್ಪ ಪೂಜಾರಿ ನ. 5ರಂದು ಪಾಣೆಮಂಗಳೂರಿನ ಬ್ಯಾಂಕ್‌ಗೆ ಹೋಗಿ ತನ್ನ ವೃದ್ಧಾಪ್ಯ ವೇತನ ಪಡೆದುಕೊಂಡು ವಾಪಸ್ಸು ಮನೆಗೆ ಬಂದಿದ್ದರು. ಬಳಿಕ ತನ್ನ ಸೊಸೆಗೆ ಕರೆ ಮಾಡಿ ಏನು ವಿಷಯವನ್ನು ತಿಳಿಸಲು ಯತ್ನಿಸಿ ಕರೆಯನ್ನು ಕಟ್ ಮಾಡಿದ್ದಾರೆ. ಮತ್ತೆ ಸೊಸೆ ತಿರುಗಿ ಪೋನ್ ಮಾಡಿದಾಗ ಪೋನ್ ರಿಸೀವ್ ಮಾಡದೆ ನಾಪತ್ತೆಯಾಗಿದ್ದರು.
ಉಗ್ಗಪ್ಪ ಅವರು ಮೊಬೈಲ್ ಕೂಡ ಮನೆಯಲ್ಲೇ ಬಿಟ್ಟು ಹೋಗಿದ್ದರು. ಎಲ್ಲ ಕಡೆ ಉಗ್ಗಪ್ಪ ಅವರನ್ನು ಹುಡುಕಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರ ಪುತ್ರ ಅನಿಲ್ ಕುಮಾರ್ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಇನ್ನು ಅದೇ ದಿನ ಉಳ್ಳಾಲ ರೈಲು ಹಳಿಯಲ್ಲಿ ಮೃ*ತದೇಹವೊಂದು ಪತ್ತೆಯಾಗಿದ್ದು, ಅದರ ವಾರಸುದಾರರು ಸಿಗದ ಹಿನ್ನೆಲೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಗುರುವಾರ ಉಗ್ಗಪ್ಪ ಅವರ ಮನೆಯವರು ಬಂದು ಮೃ*ತದೇಹವನ್ನು ಅವರದ್ದೇ ಎಂದು ಖಚಿತಪಡಿಸಿದ್ದಾರೆ. ಈ ಬಗ್ಗೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಬಂಟರ ಯಾನೆ ನಾಡವರ ಮಾತೃ ಸಂಘ, ಮಂಗಳೂರು ತಾಲೂಕು ಸಮಿತಿ, ಮಹಿಳಾ ಘಟಕ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ಕೇಂದ್ರ ಹಾಗೂ ಎಲ್ಲಾ ಶಾಲಾ ಕಾಲೇಜು ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ “ಮಾದಕದ್ರವ್ಯ ವ್ಯಸನಮುಕ್ತ ಮಂಗಳೂರು” ಕಾರ್ಯಕ್ರಮದ ಉದ್ಘಾಟನೆ ಗುರುವಾರ(ನ.14) ಸಂಜೆ ಎಸ್.ಡಿ.ಎಂ. ಕಾನೂನು ಕಾಲೇಜು ಸಭಾಂಗಣದಲ್ಲಿ ಜರುಗಿತು.
ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತಾಡಿದ ಅವರು, “ಮಾದಕ ದ್ರವ್ಯ ವ್ಯಸನದಿಂದ ಮುಕ್ತರಾಗುವುದು ಸುಲಭದ ಮಾತಲ್ಲ. ಯಾಕೆಂದರೆ ಜಿಲ್ಲೆಯಲ್ಲಿ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಟ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಆದ್ದರಿಂದ ಇದನ್ನು ತಡೆಯಲು ಸಮಾಜದ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು. ಹೆತ್ತವರು, ಮನೆಯವರು ಮಕ್ಕಳ ಮೇಲೆ ನಿಗಾ ಇರಿಸಬೇಕು. ಪೊಲೀಸ್ ಇಲಾಖೆಯಲ್ಲಿ ಟೆಸ್ಟಿಂಗ್ ಕಿಟ್ ಸಿಗುತ್ತದೆ ಅದನ್ನು ಮನೆಯಲ್ಲಿಟ್ಟು ತಿಂಗಳಿಗೊಮ್ಮೆ ಪರೀಕ್ಷೆ ಮಾಡುವುದು ಯಾಕೆ ಕಷ್ಟ? ಈ ನಿಟ್ಟಿನಲ್ಲಿ ಜನಜಾಗೃತಿಯಾಗಬೇಕು. ಪ್ರತೀ ಕಾಲೇಜಿನಲ್ಲಿ ಇಂತಹ ಟೆಸ್ಟಿಂಗ್ ನಡೆದಾಗ ಮಕ್ಕಳು ಮಾದಕ ದ್ರವ್ಯ ಸೇವಿಸಲು ಭಯ ಪಡುತ್ತಾರೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ಕೊಡಿ ಇದರಿಂದ ಸ್ವಸ್ಥ ಸಮಾಜವನ್ನು ಕಟ್ಟಬಹುದು’’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ಮಾತಾಡಿ, “ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಬೇಡಿಕೆಯೂ ಹೌದು. ನಾನು ಮೊದಲ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದೆ. ಇಂದು ಪಂಜಾಬ್ ರಾಜ್ಯವನ್ನು ಡ್ರಗ್ಸ್ ದಂಧೆ ಬೆಂಬಿಡದೆ ಕಾಡುತ್ತಿದೆ. ಅಷ್ಟು ಭೀಕರವಾಗಿ ದಂಧೆ ಎಲ್ಲೆಡೆ ಹರಡಿದೆ. ಗಡಿಯಲ್ಲಿರುವ ಸೈನಿಕನಷ್ಟೇ ದೇಶವನ್ನು ಉಳಿಸುವ ಜವಾಬ್ದಾರಿ ಈ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಡುವವರದ್ದು. ಇದು ದೇವರು ಮೆಚ್ಚುವ ಕೆಲಸ. ಇಂತಹ ಕಾರ್ಯಕ್ರಮಕ್ಕೆ ಮಂಗಳೂರು ಮಾದರಿಯಾಗಬೇಕು“ ಎಂದರು.
ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ನಮ್ಮ ದೇಶವನ್ನು ನಾಶ ಮಾಡುವ ದುಷ್ಟ ಷಡ್ಯಂತ್ರ ಮಾದಕ ದ್ರವ್ಯ ವ್ಯಸನದಿಂದ ನಡೆಯುತ್ತಿದೆ. ಇದನ್ನು ತಡೆಯಲು ಮನೆಯಲ್ಲಿ ಸಮಾಜದಲ್ಲಿ ಜಾಗೃತಿಯಾಗಬೇಕು. ಮಾದಕ ದ್ರವ್ಯ ಸೇವನೆ, ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಸಂಬಂಧಪಟ್ಟವರಿಗೆ ನೀಡಬೇಕು. ಎಲ್ಲರೂ ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಬೇಕು’’ ಎಂದರು.
ಮಂಗಳೂರು ಮೇಯರ್ ಮನೋಜ್ ಕುಮಾರ್ ಮಾತನಾಡಿ, “ಯುವಜನತೆಯನ್ನು ವ್ಯವಸ್ಥಿತವಾಗಿ ಹಾಳು ಮಾಡುವ ಮಾದಕ ದ್ರವ್ಯ ವ್ಯಸನದ ವಿರುದ್ಧ ಹೋರಾಟ ನಿರಂತರವಾಗಿರಬೇಕು” ಎಂದರು.
ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ವಸಂತ ಶೆಟ್ಟಿ, ಮಂಗಳೂರು ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಆಶಾಜ್ಯೋತಿ ರೈ, ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ, ಎಸ್.ಡಿ.ಎಂ. ಕಾನೂನು ಕಾಲೇಜು ಪ್ರಾಂಶುಪಾಲ ಡಾ. ತಾರಾನಾಥ, ತಪಸ್ಯ ಫೌಂಡೇಶನ್ ಅಧ್ಯಕ್ಷೆ ಸಬಿತಾ ಆರ್. ಶೆಟ್ಟಿ, ಎಕ್ಕಾರ್ ರತ್ನಾಕರ್ ಶೆಟ್ಟಿ , ಸಬಿತ ಆರ್ ಶೆಟ್ಟಿ, ಅಧ್ಯಕ್ಷರು, ಎಕ್ಕಾರು ರತ್ನಾಕರ್ ಶೆಟ್ಟಿ, ವೃಂದಾ ಹೆಗ್ಡೆ ಕಾರ್ಯದರ್ಶಿ, ಮಾನಸ ರೈ ಜೊತೆ ಕಾರ್ಯದರ್ಶಿ, ಭಾರತಿ ಶೆಟ್ಟಿ ಖಜಾಂಚಿ ಮತ್ತಿತರರು ಉಪಸ್ಥಿತರಿದ್ದರು. ಸಬಿತಾ ಆರ್. ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಪುಷ್ಪರಾಜ್ ವಂದಿಸಿದರು.
ಬೆಂಗಳೂರು/ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ವಯೋಮಿತಿಗೊಳಪಡಿಸಿ ಗಂಡಸರಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಆ ಮೂಲಕ ಗಂಡಸರಿಗೂ ಫ್ರೀ ಬಸ್ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ.
ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ 135ನೇ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದರು.
ಶಕ್ತಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡುಮಕ್ಕಳಿಗೂ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು.
ಡಿಕೆಶಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಡಿಸಿಎಂ ಶಿವಕುಮಾರ್ ಮಕ್ಕಳ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ಅವರ ಜೊತೆಗೆ ಮಾತನಾಡಿ ಹೇಳುವೆ ಎಂದು ತಿಳಿಸಿದ್ದಾರೆ.