ಮಂಗಳೂರು: ಎರಡು ದಿನಗಳ ಹಿಂದೆ ಉಳ್ಳಾಲ ಕಡಲ ತೀರದಲ್ಲಿ ಮುಳುಗಡೆಯಾದ ಸಿರಿಯಾ ಮೂಲದ ಹಡಗಿನಿಂದ ತೈಲ ಸೋರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸುತ್ತಮುತ್ತ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಉಳ್ಳಾಲದ ಸುಮಾರು 1.5 ನಾಟಿಕಲ್ ಮೈಲು ದೂರದ ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿ ಮುಳುಗಡೆಯಾದ ‘ಪ್ರಿನ್ಸಸ್ ಮಿರಾಲ್’ ಕಾರ್ಗೋ ಹಡಗಿನಲ್ಲಿರುವ ಫರ್ನಸ್ ಆಯಿಲ್ ಮತ್ತು ಎಂಜಿನ್ ಆಯಿಲ್ ಕೂಡಲೇ ಹೊರತೆಗೆಯಲು ಸೂಚನೆ ನೀಡಲಾಗಿದೆ.
ಮುಳುಗಡೆಯಾದ ಹಡಗಿನಿಂದ ಸಿರಿಯಾ ದೇಶದ 15 ಪ್ರಜೆಗಳನ್ನು ರಕ್ಷಿಸಲಾಗಿದೆ. ಈ ಹಡಗು ಬಟ್ಟಪ್ಪಾಡಿ ಸಮೀಪದ ಸಮುದ್ರದ ನೀರಿನಲ್ಲಿ ಮುಳುಗಡೆಯಾಗಿದೆ.
ಹಡಗು ಅವಘಡಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೋಸ್ಟ್‌ಗಾರ್ಡ್ ಹಾಗೂ ಸಂಬಂಧಿಸಿ ಇಲಾಖೆಯ ಅಧಿಕಾರಿಗಳೊಂದಿಗೆ ನಿನ್ನೆ ಸಭೆ ನಡೆಸಲಾಗಿದ್ದು ಹಡಗಿನಲ್ಲಿ ಆಯಿಲ್ ಸೋರಿಕೆಯಾಗದಂತೆ ತಡೆಗಟ್ಟಲು ಹಾಗೂ ಫರ್ನಸ್ ಆಯಿಲ್ ಮತ್ತು ಎಂಜಿನ್ ಆಯಿಲ್ ಹೊರತೆಗೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋಸ್ಟ್‌ಗಾರ್ಡ್ ಡಿಐಜಿಯವರಿಗೆ ತಿಳಿಸಲಾಗಿದೆ.
ನೀರಿನ ಗುಣಮಾಪನ:
ಹಡಗು ಅವಘಡದಿಂದ ಯಾವುದೇ ದುಷ್ಪರಿಣಾಮ ಬೀಳದಂತೆ ಸಮುದ್ರದ ನೀರಿನ ಗುಣಮಾಪನ ಮಾಡುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಲಾಗಿದೆ. ಕಾರ್ಯಾಚರಣೆಗೆ ಎಂಆರ್‌ಪಿಎಲ್ ಹಾಗೂ ಎನ್‌ಎಂಪಿಟಿ ಸಂಸ್ಥೆಯವರು ತಮ್ಮಲ್ಲಿರುವ ರಕ್ಷಣಾ ಸಾಮಾಗ್ರಿಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ.
ಒಂದು ವೇಳೆ ಆಯಿಲ್ ಸೋರಿಕೆಯಾದರೆ ಸೂಕ್ತ ಕ್ರಮ ಕೈಗೊಳ್ಳಲು ಸನ್ನದ್ಧರಾಗಿರಬೇಕೆಂದು ನಿರ್ದೇಶನ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಡಿಐಜಿ ಕೋಸ್ಟ್‌ಗಾರ್ಡ್‌ರವರನ್ನು ಚೀಫ್ ಇನ್ಸಿಡೆಂಡ್ ಕಮಾಂಡರ್ ಆಗಿ ನೇಮಿಸಲಾಗಿದೆ.