ಮುಂಬೈ: ಎನ್ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ಸಂಪರ್ಕ ಹೊಂದಿರುವ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಇಬ್ಬರು ಪುತ್ರರ ವಿರುದ್ಧ ಮುಂಬೈನ ಆಜಾದ್ ಮೈದಾನ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚಾರರ ಜತೆ ನಂಟು ಹೊಂದಿದ ಆರೋಪದಡಿ ಇತ್ತೀಚೆಗೆ ಎನ್ಸಿಪಿ ಮುಖಂಡ,
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ. ಇದೇ ವಿಚಾರವಾಗಿ ಶರದ್ ಪವರ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನೊಂದಿಗೆ ನಂಟಿದೆ.
ಹೀಗಾಗಿ ಬಂಧನಕ್ಕೊಳಾಗಿರುವ ನವಾಬ್ ಮಲಿಕ್ ಅವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಕೇಂದ್ರ ಸಚಿವ ರಾಣೆ ಅವರ ಪುತ್ರರಾದ ಬಿಜೆಪಿ ಶಾಸಕ ನಿತೇಶ್ ರಾಣೆ ಮತ್ತು ನಿಲೇಶ್ ರಾಣೆ ಹೇಳಿಕೆ ನೀಡಿದ್ದರು.
ಈ ಬಗ್ಗೆ ಎನ್ಸಿಪಿ ಮುಖಂಡ ಸೂರಜ್ ಚವ್ಹಾಣ ದೂರಿನ ಮೇರೆಗೆ ರಾಣೆ ಪುತ್ರರ ವಿರುದ್ಧ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.