ಮಂಗಳೂರು: “ನನ್ನ ರಕ್ಷಣೆಗೆ ನಿಂತಿರೋದು ಶ್ರೀರಾಮಚಂದ್ರನೇ ಹೊರತು ಪುಡಿ ರೌಡಿಗಳಲ್ಲ. ನಂಗೆ ಮತ್ತು ದೇವರಿಗಿರುವ ಸಂಬಂಧ ಏನು ಎಂದು ದೇವರಿಗೆ ಗೊತ್ತಿದೆ. ನಾನೂ ಹಿಂದೂ, ನಾನೂ ದೈವ ಭಕ್ತೆ. ನಾನು ದೇವರನ್ನು ಎಷ್ಟು ನಂಬುತ್ತೇನೆಂದು ದೇವರಿಗೆ ತಿಳಿದಿದೆ” ಕ್ಲಬ್ಹೌಸ್ ಚರ್ಚೆಯಲ್ಲಿ ವಿವಾದ ಹುಟ್ಟುಹಾಕಿದ ಕಾಂಗ್ರೆಸ್ ನಾಯಕಿ ಹಾಗೂ ನ್ಯಾಯವಾದಿ ಶೈಲಜಾ ಅಮರನಾಥ್ ಗುಡುಗಿದ್ದಾರೆ.
ಸಾಮಾಜಿಕ ಜಾಲತಾಣದ ಕ್ಲಬ್ ಹೌಸ್ನಲ್ಲಿ ಹಿಂದೂ ಆರಾಧ್ಯ ದೇವರುಗಳಾದ ಶ್ರೀರಾಮಚಂದ್ರ, ಸೀತೆ ಹಾಗೂ ಹನುಮಂತನ ಬಗ್ಗೆ ತುಚ್ಛ ಹೇಳಿಕೆ ವಿವಾದದ ಬಗ್ಗೆ ರಾಜ್ಯ ಕಾಂಗ್ರೆಸ್ ಐಟಿ ಸೆಲ್ನ ಕಾರ್ಯದರ್ಶಿ ಶೈಲಜಾ ಅಮರನಾಥ್ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಯಾವುದೇ ಷಡ್ಯಂತ್ರ ಕುತಂತ್ರಕ್ಕೆ ಬಲಿಯಾಗುವ ಹೆಣ್ಮಗಳು ನಾನಲ್ಲ. ಇವರು ನನ್ನನ್ನು ಏನೂ ಮಾಡ್ಲಿಕ್ಕೆ ಆಗಲ್ಲ.
ಇವರು ಜಾಸ್ತಿ ಅಂದ್ರೆ ನನ್ನ ಪ್ರಾಣ ತಗೋತಾರೆ ಅಷ್ಟೆ ಅಲ್ವಾ. ಹಿಂದೂಗಳನ್ನು ಕೊಂದ ಹಿಂದೂ ದ್ರೋಹಿಗಳು ಎಂದು ನೀವೇ ನ್ಯೂಸ್ ಮಾಡಿ. ಎಲ್ಲಾ ಒರಿಜಿನಲ್ ಆಡಿಯೋ ತರಿಸಿ ಜನರಿಗೆ ಪ್ರೂವ್ ಮಾಡಿ.
ನಾನು ದೂರು ಕೊಟ್ಟವರನ್ನು ಅರೆಸ್ಟ್ ಮಾಡಲಾಗದಿದ್ದರೆ ನನ್ನನ್ನೇ ಅರೆಸ್ಟ್ ಮಾಡಿ ಬೇಕಾದರೆ ತನಿಖೆ ನಡೆಸಿ. ಸಂವಿಧಾನದಲ್ಲಿ ಇದು ಹೆಣ್ಣು ಮಗಳಿಗಾಗುವ ಅನ್ಯಾಯ, ಇದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಇದೇ ವೇಳೆ ಈ ಪ್ರಕರಣದ ಬಗ್ಗೆ ಇನ್ನು 48 ಗಂಟೆಯೊಳಗೆ ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ ಸ್ಟೇಷನ್ ಮುಂದೆ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದ ಅವರು ನನ್ನನ್ನು ಕೈ ನಾಯಕಿ, ಕೈ ನಾಯಕಿ ಎಂದು ಹೇಳಲು ನಾನೇನು 80 ವರ್ಷದ ಮುದುಕಿಯಲ್ಲ.
36 ವರ್ಷದ ಯುವತಿ. ನಂಗೆ ಮತ್ತು ದೇವರಿಗಿರುವ ಸಂಬಂಧ ಏನು ಎಂದು ದೇವರಿಗೆ ಗೊತ್ತಿದೆ. ನಾನು ಹಿಂದೂ ನಾನು ದೈವ ಭಕ್ತೆ. ನಾನು ದೇವರನ್ನು ಎಷ್ಟು ನಂಬುತ್ತೇನೆಂದು ದೇವರಿಗೆ ತಿಳಿದಿದೆ.
ಇದೀಗ ನನ್ನ ರಕ್ಷಣೆಗೆ ನಿಂತಿರೋದು ಶ್ರೀರಾಮ ಚಂದ್ರನೇ ಹೊರತು ಈ ಯಾರೋ ಪುಡಿ ರೌಡಿಗಳಲ್ಲ. ನಾನು ದೂರು ಕೊಟ್ಟ ಯೂಟ್ಯೂನ್ ಚಾನೆಲ್ ಮೇಲೆ ಯಾಕೆ ತನಿಖೆ ನಡೆಸ್ತಿಲ್ಲ.
ಕಿರಿಕ್ ಕೀರ್ತಿಯನ್ನು ಯಾಕೆ ಅರೆಸ್ಟ್ ಮಾಡಿಲ್ಲ. ನಾನು ದೈವ ಭಕ್ತಳಲ್ಲ ಎಂದು ಹೇಳಿಕೆ ಕೊಡುವುದಕ್ಕೆ ಮುಮ್ತಾಜ್ ಯಾರು? ಎಂದು ಪ್ರಶ್ನಿಸಿದರು.
ಹಿಂದೂಗಳನ್ನು ಹಿಂದೂಗಳ ಮೇಲೆ ಎತ್ತಿಕಟ್ಟುವ ಸರಕಾರ ಬೇಕಾ ನಮಗೆ?. ಕ್ಲಬ್ ಹೌಸ್ ಚರ್ಚೆಯಲ್ಲಿ ನಾನು ಎರಡೇ ಎರಡು ಸಾಲು ಮಾತನಾಡಿದ್ದು,
ಆ ಪ್ರಶ್ನೆ ಕೇಳಿದವರ್ಯಾರು, ಯಾಕೆ ಆ ಪ್ರಶ್ನೆ ಬಂತು? ನಾನು ಈ ಮೊದಲು ಮಾತನಾಡಿದ್ದನ್ನು ಅಲ್ಲಿ ತಂದು ಹಾಕಿದ್ರಾ ಎಂಬ ಅನುಮಾನ ಕಾಡುತ್ತಿದೆ ಎಂದರು.
ನನಗೆ ರಕ್ಷಣೆ ಕೊಡಿಸಲಾಗದ ಶಾಸಕರು ನನ್ನ ಕ್ಷಮೆ ಕೇಳಬೇಕು. ನಾನು ಕ್ಷಮೆ ಕೇಳಬೇಕು ಅನ್ನುವ ಅಧಿಕಾರವಿಲ್ಲ. ರಕ್ಷಣೆ ಕೊಡಬೇಕಾದ ಸರಕಾರ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದೆ. ನನ್ನನ್ನು ಕೊಲ್ಲಲು ಸರಕಾರ ಪ್ರಚೋದನೆ ಮಾಡುತ್ತಿದೆ ಎಂದು ಆರೋಪಿಸಿದರು.
ಸದ್ಯ ಶೈಲಜಾ ಅಮರನಾಥ್ಗೆ ಜೀವ ಬೆದರಿಕೆ ಹಿನ್ನೆಲೆಯಲ್ಲಿ ಪುತ್ತೂರು ಪೊಲೀಸರು ಹರಿಯ ಅಧಿಕಾರಿಗಳ ಸೂಚನೆ ಮೇರೆಗೆ ಭದ್ರತೆ ಒದಗಿಸಿದ್ದಾರೆ.