ಮಂಗಳೂರು: ಧಾರವಾಹಿ ಕಾಲ್ಪನಿಕವಾಗಿದ್ರು ಕೂಡಾ ಅದು ಜನರ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಧಾರಾವಾಹಿಯಲ್ಲಿ ಬರುವ ಪಾತ್ರಗಳು ಪ್ರತಿಯೊಬ್ಬ ಜೀವನದಲ್ಲಿ ನಡೆದಿರುವ ಘಟನೆಯನ್ನು ಹೋಲುತ್ತದೆ. ಹಾಗಾಗಿ ವೀಕ್ಷಕರಿಗೂ ಇಂತಹ ಸೀನ್‌ಗಳಿಂದ ಪ್ರಭಾವಿತರಾಗುತ್ತಾರೆ ಅನ್ನೋದು ಕೂಡಾ ಸತ್ಯ.
ಇನ್ನೂ ಧಾರಾವಾಹಿಗಳಲ್ಲಿ ಬರುವ ಸನ್ನಿವೇಶಗಳನ್ನು ಎಷ್ಟೋ ಜನ ತಮ್ಮ ವೈಯಕ್ತಿಕ ಜೀವನದಲ್ಲೂ ಅಳವಡಿಸುತ್ತಾರೆ. ಹೀಗಿರುವಾಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾರಾಮ ಸೀರಿಯಲ್‌ನಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ ಸೀನ್ ಪ್ರಸಾರವಾಗಿದೆ. ಇದಕ್ಕೆ ಸಂಚಾರ ಪೊಲೀಸರು ಧಾರಾವಾಹಿಯ ನಾಯಕಿ ನಟಿ ವೈಷ್ಣವಿ ಗೌಡ ಹಾಗೂ ದ್ವಿಚಕ್ರ ವಾಹನದ ಮಾಲಕಿಯ ಮೇಲೆ ದಂಡ ವಿಧಿಸಿರುವ ಘಟನೆ ನಡೆದಿದೆ.
ಸೀತಾರಾಮ ಧಾರವಾಹಿಯ ದೃಶ್ಯವೊಂದರಲ್ಲಿ ನಟಿ ವೈಷ್ಣವಿ, ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದಕ್ಕಾಗಿ ಪೊಲೀಸರು 500ರೂ. ದಂಡ ವಿಧಿಸಿರುವ ಅಪರೂಪದ ಘಟನೆ ನಡೆದಿದೆ. ಈ ಧಾರಾವಾಹಿಯಲ್ಲಿ 14ನೇ ಸಂಚಿಕೆಯ ದೃಶ್ಯದಲ್ಲಿ ಸ್ಕೂಟರ್‌ನಲ್ಲಿ ಇಬ್ಬರು ಸಂಚರಿಸುವ ದೃಶ್ಯವಿತ್ತು. ಅದರಲ್ಲಿ ಸವಾರೆ ಹೆಲ್ಮೆಟ್ ಧರಿಸಿದ್ದರೆ ಹಿಂಬದಿ ಕುಳಿತಾಕೆ ಹೆಲ್ಮೆಟ್ ಧರಿಸಿರಲಿಲ್ಲ.
ಮಂಗಳೂರಿನವರಿಂದ ಪೊಲೀಸರಿಗೆ ದೂರು:
ಟಿವಿಯಲ್ಲಿ ಪ್ರಸಾರವಾದ ಧಾರಾವಾಹಿಯ ದೃಶ್ಯವನ್ನು ವೀಕ್ಷಿಸಿದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಎಂಬವರು, ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವುದು ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಧಾರಾವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದರು. ಮಂಗಳೂರು ನಗರ ಪೊಲೀಸ್ ಆಯುಕ್ತರು, ಮಂಗಳೂರು ಸಂಚಾರ ಪೂರ್ವ ಠಾಣೆಗೆ ಪ್ರಕರಣವನ್ನು ವಹಿಸಿದ್ದರು. ಅದರಂತೆ ಜಯಪ್ರಕಾಶ್ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲಕರಿಗೆ ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಇನ್ನು ಈ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್ ನಿಂದ ಇನ್ನುಮುಂದೆ ಈ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡದಂತೆ ಹಿಂಬರಹ ಪಡೆದುಕೊಂಡಿದ್ದಾರೆ.
ಮಲತಂದೆಯಿಂದ ಹತ್ಯೆಯಾದ ಜಗ್ಗೇಶ್ ಸಿನೆಮಾ ನಟಿ..! 13 ವರ್ಷದ ಬಳಿಕ ಮಹತ್ವದ ತೀರ್ಪು
ಧಾರಾವಾಹಿಯ ಈ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಿತ್ರೀಕರಿಸಿದ್ದು, ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು. ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ರಾಜಾಜಿನಗರ ಠಾಣಾ ಪೊಲೀಸರು ನಟಿ ವೈಷ್ಣವಿ ಗೌಡ ಮತ್ತು ದ್ವಿಚಕ್ರ ವಾಹನದ ಮಾಲಕಿಗೆ ಮೇ 10ರಂದು 500 ರೂ. ದಂಡ ವಿಧಿಸಿದ್ದಾರೆ.
ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡುತ್ತಿರುವುದನ್ನು ಗಮನಿಸಿದ್ದೆ. ಈ ಕುರಿತಾಗಿ ಆಯುಕ್ತರಿಗೆ ದೂರು ಕೂಡಾ ನೀಡಿದ್ದೆ. ಇದಕ್ಕೆ ಪೊಲೀಸರು ಉತ್ತಮ ಸ್ಪಂದನೆ ನೀಡಿದ್ದಾರೆ. ಈ ರೀತಿ ದಂಡ ವಿಧಿಸಿರುವುದು ಬೇರೆಯವರಿಗೂ ಉತ್ತಮ ಪಾಠವಾಗಲಿದ್ದು, ಜಾಗೃತಿ ಮೂಡಿಸುವ ಕೆಲಸವೂ ಆಗಿದೆ ಎಂದು ದೂರುದಾರ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಹೇಳಿದ್ದಾರೆ.