ಉಡುಪಿ: ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು. ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ಆದ್ರೆ ತುಳು ರಾಜ್ಯ ಎಂಬ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನಾನು ಮನವಿ ಸಲ್ಲಿಸಿದ್ದೇನೆ. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ ಪ್ರಯತ್ನ ಮಾಡುತ್ತೇವೆ. ಆದ್ರೆ ನಾವು ಕರ್ನಾಟಕದವರು. ತುಳುರಾಜ್ಯ ಎಂಬ ಕುಚೋದ್ಯದ ಬೇಡಿಕೆ ಮತ್ತು ಆಶಯಗಳಿಗೆ ನಮ್ಮ ಯಾವುದೇ ಬೆಂಬಲ ಇಲ್ಲ.
ಕರ್ನಾಟಕ ಏಕೀಕರಣವಾದ ಮೇಲೆ ನಾವೆಲ್ಲ ಒಟ್ಟಾಗಿ ಇರಬೇಕಾದವರು. ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆ ಇದೆ. ತುಳುನಾಡು ಎಂಬ ಬೇಡಿಕೆ ಸರಿಯಲ್ಲ.
ಕರ್ನಾಟಕದಲ್ಲಿ ತುಳು ಭಾಷೆಗೆ ಗೌರವ ಸಿಗಬೇಕು. ತುಳು ಭಾಷೆಗಾಗಿ ನಮ್ಮ ಹೋರಾಟ ಇದೆ ಎಂದರು.
ಪುತ್ತೂರು: ಉಪ್ಪಿನಂಗಡಿ ರಸ್ತೆಯ ದಾರಂದಕುಕ್ಕು ಕೊಲ್ಯ ಎಂಬಲ್ಲಿ ಇಂದು ಬೆಳಿಗ್ಗೆ ಬೈಕ್, ಬಸ್ ಡಿಕ್ಕಿ ಹೊಡದು ಬೈಕಿನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳ್ಳಿಪ್ಪಾಡಿ ನಿವಾಸಿಗಳಾಗಿರುವ ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿ ಬೈಕ್ ಸವಾರ ನಿಶಾಂತ್ ಮತ್ತು ಹಿಂಬದಿ ಸವಾರ ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಿದ್ಯಾರ್ಥಿ ಕಾರ್ತಿಕ್ ಗಾಯಗೊಂಡಿದ್ದಾರೆ. ಅವರು ಬೈಕ್ ನಲ್ಲಿ ಪುತ್ತೂರಿಗೆ ಬರುತ್ತಿದ್ದ ವೇಳೆ ವಿರುದ್ದ ದಿಕ್ಕಿನಿಂದ ಬಂದ ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ.
ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರಗೆ ದಾಖಲಿಸಲಾಗಿದೆ. ಪುತ್ತೂರಿನ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿ ದೂರು ದಾಖಲಿಸಿದ್ದಾರೆ.
ಮಂಗಳೂರು: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಕ್ಯೂ ಕಾಂಪ್ಲೆಕ್ಸ್ ಶ್ರೀ ಸಾನ್ನಿಧ್ಯವನ್ನ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಮಂಗಳವಾರ ಲೋಕಾರ್ಪಣೆ ಮಾಡಿದರು.
ಪತ್ನಿ ಸಮೇತರಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಧನ್‌ಕರ್, ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಕಾಂಪ್ಲೆಕ್ಸ್ ಉದ್ಘಾಟಿಸಿ ಅಮೃತವರ್ಷಿಣಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾದರು.
ವೇದಿಕೆಯಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಪತ್ನಿ ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಉಪಸ್ಥಿತರಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪರಾಷ್ಟ್ರಪತಿ ಕ್ಷೇತ್ರ ಕೆಲಸ ಕಾರ್ಯಗಳನ್ನ ಪ್ರಶಂಸಿಸಿ, ಇನ್ನಷ್ಟು ಒಳ್ಳೆ ಕಾರ್ಯ ನಡೆಯಲಿ ಎಂದು ಹಾರೈಸಿದರು.
ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಅವರು, ಮಂಜುನಾಥ ದೇವರ ದರ್ಶನಕ್ಕೆ ಬರುವ ಭಕ್ತರಿಗಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಿದ್ದಾರೆ. ಲಕ್ಷಾಂತರ ಜನರು ಧರ್ಮಸ್ಥಳಕ್ಕೆ ಆಗಮಿಸುತ್ತಾರೆ. ಭಕ್ತರು ನಿಲ್ಲುವುದಕ್ಕಾಗಿ ಕ್ಯೂ ಕಾಂಪ್ಲೆಕ್ಸ್ ಮಾಡಲಾಗಿದೆ. ಇದು ಕೇವಲ ಕಟ್ಟಡ ಮಾತ್ರ ಅಲ್ಲ, ವೈದ್ಯಕೀಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡ ಕೇಂದ್ರ ಎಲ್ಲ ಜನರಿಗೆ ಒಂದೇ ಕಡೆ ನಿಲ್ಲುವ ವ್ಯವಸ್ಥೆ ಮಾಡಿದ್ದು, ಸಮಾನತೆಯನ್ನು ತೋರಿಸುತ್ತದೆ. ಧಾರ್ಮಿಕ ಸಂಸ್ಥೆಗಳು ಈ ದೇಶದಲ್ಲಿ ಸಂಸ್ಕೃತಿ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿವೆ. ಧಾರ್ಮಿಕ ಸಂಸ್ಥೆಗಳೇ ಈ ದೇಶದ ಗ್ರಾಮೀಣ ಪ್ರದೇಶದ ಶಕ್ತಿ. ಶಿಕ್ಷಣವೇ ದೇಶದಲ್ಲಿ ಸಮಾನತೆ ತರುವ ಮುಖ್ಯ ಸಾಧನವಾಗಿದೆ ಎಂದು ತಿಳಿಸಿದರು.
ನಮ್ಮ ನಾಗರಿಕ ಜೀವನ ಇನ್ನಷ್ಟು ಬೆಳಗಬೇಕು. ದೇಶದಲ್ಲಿ ಸೌಹಾರ್ದ ವಾತಾವರಣ ಬೆಳೆಸಬೇಕು. ರಾಜಕೀಯವಾಗಿ ಇನ್ನಷ್ಟು ಪ್ರಬಲರಾಗಬೇಕು, ದೇಶವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಒಗ್ಗೂಡಬೇಕು. ಮೆಸಪೊಟೆಮಿಯಾ, ಚೀನಾ ನಾಗರಿಕತೆ ನಾಶವಾಗಿದೆ. ನಮ್ಮ ನಾಗರಿಕತೆ ಮಾತ್ರ ಇನ್ನೂ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ನಮಗೆ ಎಲ್ಲ ಸ್ವಾತಂತ್ರ‍್ಯ ಕೊಟ್ಟಿದೆ. ಅಭಿಪ್ರಾಯ ಹೇಳಿಕೊಳ್ಳುವ ಸ್ವಾತಂತ್ರ‍್ಯ ಇದೆ. ಸಶಕ್ತ ಪ್ರಜಾಪ್ರಭುತ್ವ ನಮ್ಮಲ್ಲಿದೆ, ಜನರ ಅಭಿಪ್ರಾಯಕ್ಕೆ ಬೆಲೆ ಇದೆ. ಜನಪ್ರತಿನಿಧಿಗಳು ಜನರ ಆದ್ಯತೆಗೆ ಬೆಲೆ ಕೊಡಬೇಕಿದೆ. ಸಂವಿಧಾನವೇ ನಮ್ಮಲ್ಲಿ ಪರಮೋಚ್ಛವಾದುದು. ಜನರ ಮತಕ್ಕೆ ಬೆಲೆ ಇದ್ದರೆ ಮಾತ್ರ ಸಶಕ್ತ ಪ್ರಜಾಪ್ರಭುತ್ವ ಸಾಧ್ಯ ಎಂದರು.
ದೇಶ ಆಂತರಿಕವಾಗಿ ಸಶಕ್ತ ಆಗಬೇಕಿದೆ, ದೇಶದ ಸೇವೆಗಾಗಿ ಜನತೆ ಮುಂದೆ ಬರಬೇಕಿದೆ. ರಾಜಕಾರಣಿಗಳು ವಿಭಿನ್ನ ಸಿದ್ಧಾಂತ ಹೊಂದಿರಬಹುದು. ಆದರೆ ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯಬಾರದು. ದಿನದ 24 ಗಂಟೆಯೂ ರಾಜಕಾರಣವೇ ಮುಖ್ಯವಾಗಿರಬೇಕೇ? ದೇಶ ಸೇವೆಗೆ ಸಮಯ ವಿನಿಯೋಗ ಮಾಡುತ್ತಿದ್ದಾರೆಯೇ? ನಮ್ಮ ಸಮಾಜ ಯಾಕೆ ಧ್ರುವೀಕರಣ ಆಗುತ್ತಿದೆ, ಅತ್ಯುನ್ನತ ನಾಗರಿಕತೆ ನಮ್ಮದು. ದೇಶದಲ್ಲಿ ಸಮಗ್ರತೆ, ವೈವಿಧ್ಯತೆ, ಸೌಹಾರ್ದವನ್ನು ಉಳಿಸಿಕೊಳ್ಳಬೇಕಾಗಿದೆ. ನಾವು ಸೌಹಾರ್ದ ವಾತಾವರಣ ಉಳಿಸಿಕೊಳ್ಳುವುದು ಮುಖ್ಯ. ದೇಶದ ಜನರಲ್ಲಿ ಮೂಲಭೂತ ಕರ್ತವ್ಯದ ಬಗ್ಗೆ ಜಾಗೃತಿ ಹುಟ್ಟಬೇಕಾಗಿದೆ. ಸಾಮಾಜಿಕ ಸದ್ಭಾವ ಎಲ್ಲಿಂದ ಬರಬೇಕು, ಭಾರತ ಮಾತೆ ಒಂದೇ ಎಂದಾಗ ಈ ಭಾವನೆ ಬರುತ್ತದೆ. ನಾವು ದೇಶಕ್ಕಾಗಿ ಕೆಲಸ ಮಾಡಬೇಕಿದೆ, ದೇಶವೇ ಮೊದಲ ಆದ್ಯತೆ ಆಗಬೇಕಿದೆ ಎಂದು ಹೇಳಿದರು.
ಪುತ್ತೂರು : ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ಮಹಿಳೆಯ ಜತೆ ಕಾಮುಕ ಪುರುಷನೊಬ್ಬ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜ ಎಂಬಲ್ಲಿ ನಡೆದಿದೆ.
ಅಸಭ್ಯವಾಗಿ ವರ್ತಿಸಿದ ವ್ಯಕ್ತಿ ಬಶೀರ್ ಎಂದು ತಿಳಿದು ಬಂದಿದೆ. ಕಾಮುಕ ಬಶೀರ್ ಮೊದಲಿಗೆ ಮಹಿಳೆಗೆ ಡ್ಯಾಶ್ ಹೊಡೆದಿದ್ದಾನೆ. ಬಳಿಕ ಆಕೆಯನ್ನು ಮನೆ ತನಕ ಹಿಂಬಾಲಿಸಿ, ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ. ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ಆಗಮಿಸಿ, ಕಾಮುಕ ಬಶೀರನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವಿಷಯ ತಿಳಿದು ತಕ್ಷಣ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಬಶೀರ್ ಈ ಮೊದಲು ಕೂಡಾ ಇದೇ ದಾರಿಯಲ್ಲಿ ಹೋಗುವ ಮತ್ತು ಬರುವ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ಮಾಹಿತಿ ಇದೆ.