ಕಾನ್ಸ್ಟೇಬಲ್ ನಿಂದ ಎಸ್ಐಗೆ ಬಡ್ತಿ ಪಡೆದ ಸೀಮಾ ದಾಕಾ
ದಿಲ್ಲಿ: ದೇಶದ ರಾಜಧಾನಿಯಲ್ಲಿ ನಾಪತ್ತೆಯಾಗಿದ್ದ 76 ಮಕ್ಕಳನ್ನು ಪತ್ತೆಹಚ್ಚಿದ ಮಹಿಳಾ ಪೊಲೀಸ್ ಕಾನ್ಸ್‍ಟೇಬಲ್ ಸೀಮಾ ದಾಕಾಗೆ ಸರ್ಕಾರ ಸಹಾಯಕ ಸಬ್‍ಇನ್ಸ್‍ಪೆಕ್ಟರ್ ಬಡ್ತಿ ನೀಡಿ ಪ್ರೋತ್ಸಾಹಿಸಿದೆ.ಇತ್ತೀಚೆಗೆ ಪೊಲೀಸ್ ಕಮೀಷನರ್ ಎಸ್.ಎನ್.ಶ್ರೀವಾಸ್ತವ ಅವರು ಕಾಣೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚುವ ಪೊಲೀಸರಿಗೆ ಪ್ರೋತ್ಸಾಹ ಧನ ಹಾಗೂ ಬಡ್ತಿ ನೀಡುವುದಾಗಿ ಘೋಷಿಸಿದ್ದರು.
ಕಮೀಷನರ್ ರವರ ಈ ಭರವಸೆಯಿಂದಾಗಿ ಕಾರ್ಯಾಚರಣೆಗೆ ಇಳಿದ ಕಾನ್ಸ್‍ಸ್ಟೇಬಲ್‍ಗಳು ಹಾಗೂ ಹೆಡ್‍ಕಾನ್‍ಸ್ಟೇಬಲ್‍ಗಳು ಮಕ್ಕಳ ಪತ್ತೆ ಕಾರ್ಯದಲ್ಲಿ ತೊಡಗಿ 1440 ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ. ದೆಹಲಿಯ ಪೊಲೀಸ್ ಸೀಮಾ ದಾಕಾ ಅವರು ಪಂಜಾಬ್, ಉತ್ತರಪ್ರದೇಶ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಕಾಣೆಯಾಗಿದ್ದ 76 ಮಕ್ಕಳನ್ನು ಪತ್ತೆಹಚ್ಚಿದ ಪರಿಣಾಮ ಅವರಿಗೆ ಎಎಸ್‍ಐ ಆಗಿ ಬಡ್ತಿ ನೀಡಲಾಗಿದೆ.
ದೆಹಲಿ ಪೊಲೀಸ್ ವಕ್ತಾರ ಐಶ್ ಸಿಂಘಾಲ್ ಸುದ್ದಿಗಾರರೊಂದಿಗೆ ಮಾತನಾಡಿ, ಸೀಮಾ ದಾಕಾ ಅವರು 76 ಮಕ್ಕಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವುದರಿಂದ ಅವರ ಕೆಲಸವನ್ನು ಉತ್ತೇಜಿಸುವ ಸಲುವಾಗಿ ಬಡ್ತಿ ನೀಡಲಾಗಿದೆ ಎಂದು ಹೇಳಿದರು.
2019 ರಲ್ಲಿ 5,412 ಮಕ್ಕಳು ಕಾಣೆಯಾಗಿದ್ದಾರೆ. ಶೇ.61.64 ಮಕ್ಕಳನ್ನು ಪತ್ತೆ ಹಚ್ಚಲಾಗಿದೆ. 2020ರಲ್ಲಿ 3,507 ಮಕ್ಕಳು ನಾಪತ್ತೆಯಾಗಿದ್ದರೆ, ಶೇ. 74.96 ರಷ್ಟು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿದುಬಂದಿದೆ.