ಮಂಗಳೂರು : ಮಂಗಳೂರು ಹೊರ ವಲಯದ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಿ – ದರ್ಗಾ ವಿವಾದ ಇತ್ಯಾರ್ಥವಾಗುವ ಲಕ್ಷಣ ಕಾಣುತ್ತಿಲ್ಲ.
ಅಲ್ಲಿ ದೇಗುಲ ಇತ್ತೆಂಬ ವಿಚಾರವಾಗಿ ನಾಳೆ ವಿಹೆಚ್‌ಪಿ – ಬಜರಂಗದಳ ತಾಂಬೂಲ ಪ್ರಶ್ನೆಗೆ ಮುಂದಾಗಿದೆ.
ಇದರಿಂದ ಶಾಂತಿ ಸುವ್ಯವಸ್ಥೆ ಹದಗೆಡುವ ಅಪಾಯ ಇರುವ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಇಂದು ರಾತ್ರಿಯಿಂದ ಮೇ 26 ರ ಬೆಳಗ್ಗೆ ವರೆಗೆ ಬಜಪೆ ಠಾಣಾ ವ್ಯಾಪ್ತಿಯ ತೆಂಕುಳಿಪಾಡಿ ಗ್ರಾಮದ ಪೊಳಲಿ ಪೇಟೆಯ ಜುಮ್ಮಾ ಮಸೀದಿ ಸುತ್ತ ಮುತ್ತ 500 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಹೊರಡಿಸಿ ಮಂಗಳೂರು ನಗರ ಪೊಲಿಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹಿಂದುತ್ವ ಸಂಘಟನೆಗಳ ನೇತೃತ್ವದಲ್ಲಿ ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ತೆಂಕ ಉಳಿಪಾಡಿ ಗ್ರಾಮದ ಜೋಡು ತಡಮೆಯ ಬಳಿಯ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪೂರ್ವಾಪರ ತಿಳಿದುಕೊಳ್ಳಲು ಮೇ 25ರಂದು ಬೆಳಗ್ಗೆ 8.30ರಿಂದ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನಡೆಸಲು ಹೊರಟಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಳಲಿ ಪೇಟೆ ಜುಮಾ ಮಸೀದಿಯ ಸುತ್ತಮುತ್ತಲಿನ 500 ಮೀಟರ್ (ಕಾಚಿಲಕೋಡಿಯಿಂದ ಮಳಲಿ ಕಡೆಗೆ ಬರುವ ರಸ್ತೆ, ಗಂಜಿಮಠದಿಂದ ಮಳಲಿ ಮಸೀದಿ ಕಡೆಗೆ ಬರುವ ರಸ್ತೆ ಹಾಗೂ ಕೈಕಂಬ ಕಡೆಯಿಂದ ಜೋಡು ತಡಮೆ ರಸ್ತೆ)ವರೆಗೆ ಮೇ 24ರ ರಾತ್ರಿ 8ರಿಂದ ಮೇ 26ರ ಬೆಳಗ್ಗೆ 8ರವರೆಗೆ ಸೆ.144ರ ಅನ್ವಯ ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.