ಮಂಗಳೂರು : ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಮೃತದೇಹ ಊರಿಗೆ ತರಲು ಶಾಸಕ ಯು.ಟಿ ಖಾದರ್ ಅವರು ಸ್ಪಂಧಿಸಿದ್ದು, ಅದರಂತೆ ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆ ಮೃತದೇಹ ತವರೂರಿಗೆ ತರಲು ಶ್ರಮಿಸುತ್ತಿದೆ.
ಸೌದಿ ಅರೆಬಿಯಾದಲ್ಲಿ ಕೆಲಸಕ್ಕಿದ್ದ , ಕುತ್ತಾರು ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿಸೋಜ (50) ನಿಗೂಢ ರೀತಿಯಲ್ಲಿ ಸಾವನ್ನಪ್ಪಿದವರು. ಮಾ.19 ರಂದು ತಮ್ಮ ರೂಮಿನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಅಂದು ಮನೆಮಂದಿ ಜತೆಗೆ ವೀಡಿಯೋ ಸಂಭಾಷಣೆ ನಡೆಸಿದ್ದ ರೊನಾಲ್ಡ್ ರಾತ್ರಿ ವೇಳೆ ಕರೆ ಸ್ವೀಕರಿಸುತ್ತಿರಲಿಲ್ಲ. ಎರಡು ದಿನಗಳಲ್ಲಿ ಊರಿಗೆ ಬರುವುದನ್ನು ತಿಳಿಸಿದ್ದ ಅವರ ಸಾವಿನ ಕುರಿತು ಮನೆಮಂದಿಗೆ ಮಾ.21 ರಂದು ಮುಂಬೈ ಖಾಸಗಿ ಏಜೆನ್ಸಿ ಮುಖೇನ ಗೊತ್ತಾಗಿದೆ.
ಸೌದಿ ಅರೇಬಿಯಾದ ಜಿಝಾನ್ ನ ಒಸೋಲ್ ಅಲ್ ಬಾನ್ ಎಂಬ ಕಂಪೆನಿಯಲ್ಲಿ ರೊನಾಲ್ಡ್ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದರು.
ಶಾಸಕರ ಮಾನವೀಯ ಸ್ಪಂಧನೆ:
ಮನೆಮಂದಿಯ ಮನವಿಯಂತೆ ಮಾಜಿ ಸಚಿವ ಯು.ಟಿ ಖಾದರ್ ಅವರು ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಜಿ.ಕೆ. ಸಲೀಂ ಗುರುವಾಯನಕೆರೆ ಮತ್ತು ಸಿದ್ದೀಖ್ ಉಳ್ಳಾಲ್ ಅವರನ್ನು ಸಂಪರ್ಕಿಸಿದ್ದರು. ಅವರು ಆಸ್ಪತ್ರೆ ಹುಡುಕಾಡಿ , ಪೊಲೀಸ್ ಪ್ರಕ್ರಿಯೆ ಮುಗಿದ ತಕ್ಷಣ ಮೃತದೇಹವನ್ನು ತವರೂರಿಗೆ ಕಳುಹಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೃತ ರೊನಾಲ್ಡ್ ಡಿ ಸೋಜಾ ಅವರು ಪತ್ನಿ ಸರಿತಾ ಡಿ ಸೋಜಾ ಮಕ್ಕಳಾದ ರಿಯೋನ್ (16) ಮತ್ತು ರೋವಿನ್ (14) ಎಂಬವರನ್ನು ಅಗಲಿದ್ದಾರೆ.