ಸಂಕ್ರಾಂತಿ ಸಂಭ್ರಮ- ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್ ಈ ‘ಅಯ್ಯಪ್ಪ’ನ ಚಿತ್ರ!
ಮಂಗಳೂರು:ಇಂದು ನಾಡಿನೆಲ್ಲೆಡೆ ಸಂಭ್ರಮ ಸಡಗರದಿಂದ ಮಕರ ಸಂಕ್ರಾತಿ ಹಬ್ಬವನ್ನು ಆಚರಿಸಲಾಗುತ್ತದೆ. ಮಕರ ಸಂಕ್ರಾತಿಯ ಪವಿತ್ರ ದಿನವಾದ ಇಂದು ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನ ನೆರವೇರಲಿದೆ.ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜಾ, ಸಂಪ್ರದಾಯಗಳು ನಡೆಯಲಿವೆ. ಇದರ ಜೊತೆಗೆ ವಿಶೇಷವೆಂಬಂತೆ ಸೋಶಿಯಲ್ ಮೀಡಿಯಾದಲ್ಲಿ ಅಯ್ಯಪ್ಪ ಸ್ವಾಮಿಯ ಚಿತ್ರವೊಂದು ಸಖತ್ ವೈರಲ್ ಆಗುತ್ತಿದೆ.
48 ದಿನಗಳ ವೃತವನ್ನಾಚರಿಸಿ ಪವಿತ್ರ 18 ಮೆಟ್ಟಿಲ ಏರುವ ಭಕ್ತರಿಗೆ, ಮಕರ ಸಂಕ್ರಮಣದಂದು ಜ್ಯೋತಿಯಾಗಿ ದರುಶನ ನೀಡಿ ಸಮತೆ ಸಾರಿದ ಮಮತೆ ತೋರಿದ, ಸರ್ವ ಜನ ಮೈತ್ರಿಯ ಸಂದೇಶ ಸಾರಿದ ಶಬರಿಮಲೆ ಅಯ್ಯಪ್ಪನ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಈ ಚಿತ್ರವನ್ನು ರಚಿಸಿದ ಕಲಾವಿದ ಶಶಾಂಕ್ ಆಚಾರ್ಯ. ಈ ಕಲಾವಿದ ಬೇರೆ ಯಾರೂ ಅಲ್ಲ ಈ ಹಿಂದೆಯೂ ತುಳುನಾಡಿನ ಕಾರಣಿಕ ದೈವ ಸ್ವಾಮಿ ಕೊರಗಜ್ಜ, ಮಂತ್ರದೇವತೆ, ಪ್ರಧಾನಿ ಮೋದಿ, ಸೇರಿದಂತೆ ಬ್ರಹ್ಮಶ್ರೀ ನಾರಾಯಣಗುರುಗಳ ಚಿತ್ರವನ್ನು ವೆಕ್ಟರ್ ಆರ್ಟ್ ಮಾಧ್ಯಮದಲ್ಲಿ ರಚಿಸಿ ತುಳುನಾಡಿನ ಜನರ ಪ್ರಶಂಸೆಗೆ ಪಾತ್ರರಾಗಿದ್ದರು.
ಇದೀಗ ಮಕರ ಸಂಕ್ರಾತಿಯಂದು ರಚಿಸಿದ ಹರಿಹರ ವರ ಸುತನಾಗಿ ಆವಿರ್ಭವಿಸಿ ಪಂದಳಂ ರಾಜ್ಯದಲ್ಲಿ ಮಣಿಕಂಠನಾಗಿ ಮೆರೆದು ಮಹಿಷಿ ಮರ್ದನಗೈದು ಶಬರಿ ಮಲೆಯಲ್ಲಿ ನೆಲೆನಿಂತ ಸ್ವಾಮಿ ಅಯ್ಯಪ್ಪನ ಶಶಾಂಕ್ ಆಚಾರ್ಯ ಬಿಡಿಸಿದ ವೆಕ್ಟರ್ ಆರ್ಟ್ ಚಿತ್ರ ಭಕ್ತರ, ಚಿತ್ರ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.