ಸ್ಕೂಟರಿನಲ್ಲಿ ಬಂದು ಮರಳು ಮಾಫೀಯದ ಚಳಿ ಬಿಡಿಸಿದ ಮಂಗಳೂರಿನ ಸಾಂಗ್ಲೀಯಾನ..!
ಮಂಗಳೂರು : ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಒಂದಲ್ಲ ಒಂದು ಸದಾ ಸುದ್ದಿಯಲ್ಲಿದ್ದು ಹದಗೆಟ್ಟ ಮಂಗಳೂರಿನ ಕಾನೂನು ಸುವ್ಯವಸ್ಥೆ, ಡ್ರಗ್ ಮಾಫೀಯಾ, ರೌಡಿಸಂ ಗಳನ್ನ ಮಟ್ಟ ಹಾಕುವ ಪ್ರಯತ್ನ ಮಾಡುತ್ತಿದ್ದು ಸಾಕಷ್ಟು ಯಶಸ್ಸನ್ನು ಪಡೆದಿದ್ದಾರೆ,
ಇದೀಗ ಮುಂದುವರೆದ ಭಾಗವಾಗಿ ಮಂಗಳೂರಿನಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಾಟ ದಂಧೆಗೆ ಬ್ರೇಕ್ ಹಾಕಲು ಸ್ವತಃ ಆಯುಕ್ತರೇ ಅಖಾಡಕ್ಕೆ ಇಳಿದಿದ್ದಾರೆ.
ಆಯುಕ್ತರಿಗೆ ಡಿಸಿಪಿ ಸಾತ್ ನೀಡಿದ್ದು ಅಕ್ರಮ ಮರಳುಸಾಗಣೆದಾರರ ಚಳಿ ಬಿಡಿಸಿದ್ದಾರೆ. ಕೇರಳ ಗಡಿ ಭಾಗವಾದ ತಲಪಾಡಿಯಲ್ಲಿ ಸ್ಕೂಟರ್ನಲ್ಲಿ ಬಂದು ಜಂಟಿ ನಡೆಸಿ ಅಕ್ರಮ ಮರಳು ಸಾಗಣೆಯ ಲಾರಿಯನ್ನು ತಡೆದು ನಿಲ್ಲಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಅವರುಗಳ ಕಾರ್ಯಾಚರಣೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಮತ್ತು ಉಪ ಪೊಲೀಸ್ ಹರಿರಾಂ ಇಬ್ಬರೂ ಒಂದೇ ಸ್ಕೂಟರ್ನಲ್ಲಿ ತಲಪಾಡಿಯಲ್ಲಿ ಬಂದು ಈ ಕಾರ್ಯಾಚರಣೆ ನಡೆಸಿದ್ದಾರೆ.
ಈ ಸಂದರ್ಭ ಇಬ್ಬರೂ ಪೊಲೀಸ್ ಸಮವಸ್ತ್ರದಲ್ಲಿಲ್ಲದೆ ಸಾಮಾನ್ಯ ಉಡುಪಿನಲ್ಲಿದ್ದರು. ಮಧ್ಯರಾತ್ರಿ 2.30 ರ ಸುಮಾರಿಗೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಟೋಲ್ ದಾಟಿ ಕೇರಳ ಕಡೆಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯನ್ನು ನೋಡಿ ಅಡ್ಡಗಟ್ಟಿದ್ದಾರೆ.
ಈ ವೇಳೆ ಪೊಲೀಸ್ ಆಯುಕ್ತರೆಂದು ಗೊತ್ತಿಲ್ಲದೆ ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಕಾರಿನಲ್ಲಿದ್ದವರು ಅಡ್ಡಗಟ್ಟಲು ಮುಂದಾದಾಗ ಪೊಲೀಸ್ ಆಯುಕ್ತರು, ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಮರಳು ಲಾರಿಗೆ ಎಸ್ಕಾರ್ಟ್ ನೀಡುತ್ತಿದ್ದ ಚಂದ್ರ ಎಂಬಾತನನ್ನು ವಶಕ್ಕೆ ಪಡೆದು ಅವನ ಮಾಹಿತಿ ಆಧಾರಿಸಿ ಒಟ್ಟು 10 ಮಂದಿ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ.
ಟಿಪ್ಪರ್ ಚಾಲಕ ಸೂರಜ್, ಚಂದ್ರಹಾಸ, ರಾಕೇಶ್, ಸನಂ ಹಾಗೂ ಲಾರಿ ಮಾಲೀಕನ ವಿರುದ್ಧ ಸುಮೋಟೊ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಎಸ್.ಐ ಚಂದ್ರ ಎಂಬವರನ್ನು ದೂಡಿ, ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆ.ಸಿ ರೋಡ್ ನಿವಾಸಿ ಇಲ್ಯಾಸ್, ರಹೀಂ ಹಾಗೂ ಪರಾರಿಯಾದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳು ಎರಡು ಕಾರುಗಳ ಮೂಲಕ ಮರಳು ಲಾರಿಗಳಿಗೆ ಎಸ್ಕಾಟ್೯ ನೀಡುತ್ತಿದ್ದರು ಎನ್ನಲಾಗ್ತಿದೆ.