ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.
ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಈ ಗ್ರಾಮದ ಜನ ಕಳೆದ 40 ವರ್ಷಗಳಿಂದ ಬಿದಿರಿನ ತೂಗು ಸೇತುವೆಯ ಮುಖಾಂತರ ಜೀವ ಭಯದಲ್ಲಿ ಜೀವನ ನಡೆಸುತಿದ್ದಾರೆ.
ಇಲ್ಲಿನ ಅರಂತೋರು ಗ್ರಾಮದ ಅರಮನೆಗಾಯ ಎಂಬಲ್ಲಿ ಸುಮಾರು 100 ಪರಿಶಿಷ್ಟ ಪಂಗಡದ ಕುಟುಂಬಗಳ ಮನೆಗಳಿದ್ದು ಇಲ್ಲಿ ಹರಿಯುತ್ತಿರುವ ಬಲ್ನಾಡು ಹೊಳೆಗೆ ಸಂಪರ್ಕ ಸೇತುವೆ ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಹಲವು ವರ್ಷಗಳಿಂದ ಆಗ್ರಹಿಸುತ್ತಿರುವ ಬೇಡಿಕೆ ಇನ್ನೂ ಈಡೇರಿಲ್ಲ.
ಸುಳ್ಯ ಮೀಸಲಾತಿ ಕ್ಷೇತ್ರದ ಶಾಸಕರು ಸಚಿವರಾಗಿರುವ ಎಸ್. ಅಂಗಾರ ಅವರಿಗೆ ಮನವಿ ಮಾಡಿದರೂ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಗ್ರಾಮಸ್ಥರು ಪ್ರತಿಭಟನೆಗೆ ಸಜ್ಜಾಗಿದ್ದಾರೆ.
ಅರಮನೆಗಾಯದ ದಲಿತ ಕುಟುಂಬದವರು ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಅಳವಡಿಸಿದ್ದಾರೆ ಎಂದು ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ ಹೇಳಿದ್ದಾರೆ.
ಮಕ್ಕಳು ಆ ತೂಗು ಸೇತುವೆ ಮೇಲೆ ಶಾಲೆಗೆ ಹೋಗುವ ಸಂದರ್ಭದಲ್ಲಿ ಸ್ವಲ್ಪ ಆಯ ತಪ್ಪಿದರೂ ನದಿಗೆ ಬೀಳುವ ಪರಿಸ್ಥಿತಿ ಇದ್ದರೂ ಇವತ್ತುವರೆಗೆ ಶಾಸಕರು ಇಲ್ಲಿ ಬಂದು ನೋಡಿಲ್ಲ.
ಶಾಸಕರು ಸುಳ್ಳು ಭರವಸೆಗಳನ್ನು ನೀಡಿ ಇಲ್ಲಿನ ಜನತೆಯನ್ನು ವಂಚಿಸಿಕೊಂಡೇ ಬಂದಿದ್ದಾರೆ.
ಈ ಬಾರಿ ಇಲ್ಲಿನ ದಲಿತ ನಿವಾಸಿಗಳು ಯಾವುದೇ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ನಿರ್ಧರಿಸಿ ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಕೂಡ ಅಳವಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.