ಪುತ್ತೂರು: ಕಳೆದ ಹತ್ತು ದಿನಗಳಿಂದ ಸಂಪ್ಯ ಪರಿಸರದಲ್ಲಿ ಪ್ಲಾಸ್ಟಿಕ್, ರಬ್ಬರ್ ಬೆಂಕಿಯಿಂದ ಪಸರಿಸುತ್ತಿದ್ದ ವಿಷಗಾಳಿಗೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ಮುಕ್ತಿ ನೀಡಿದ್ದಾರೆ.
ಸಂಪ್ಯ ಕಮ್ಮಾಡಿ ಮೈದಾನದಲ್ಲಿ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದು ಹಾಕಿದ್ದ ಕೆಎಸ್ಆರ್ಟಿಸಿ ಬಸ್ಸಿನ ತ್ಯಾಜ್ಯ ರಾಶಿಯ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿದ್ದಾರೆ. ಘಟನೆ ವಿವರ: ಬೆಂಗಳೂರು ಮೂಲದ ರಾಯಲ್ ಆಟೋ ಮೊಬೈಲ್ಸ್ ಸಂಸ್ಥೆ ಕಳೆದ ಎರಡು ತಿಂಗಳಿನಿಂದ ಕೆಎಸ್ ಆರ್ ಟಿಸಿ ಸಂಸ್ಥೆಯಿಂದ ಏಲಂ ನಲ್ಲಿ ಪಡೆದುಕೊಂಡಿದ್ದ ನಿರುಪಯೋಗಿ(ಗುಜುರಿ) ಬಸ್ ಗಳನ್ನು ಪ್ರತ್ಯೇಕವಾಗಿ ವಿಂಗಡಿಸುವ ಕಾರ್ಯ ನಡೆಸುತ್ತಿತ್ತು.
ಇದರಂತೆ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್, ರಬ್ಬರ್ , ಟಯರ್ ನ ತ್ಯಾಜ್ಯಗಳಿಗೆ ರಾತ್ರಿಹೊತ್ತು ಬೆಂಕಿ ಹಾಕುವ ಮೂಲಕ ಪರಿಸರದಲ್ಲಿ ವಿಷಗಾಳಿ ಹರಡುವ ಕಾರ್ಯ ನಡೆಸುತ್ತಿತ್ತು. ತಡರಾತ್ರಿ ಬೆಂಕಿ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಬಹುತೇಕರ ಗಮನಕ್ಕೆ ಬಂದಿರಲಿಲ್ಲ.
ಈ ವಿಷಗಾಳಿಯಿಂದ ಪರಿಸರದ ಹಲವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೆಲವು ಮನೆಮಂದಿ ನೆಂಟರಮನೆಗೆ ವಲಸೆ ಹೊರಟಿದ್ದಾರೆ.
ಸ್ಥಳೀಯವಾಗಿ ಹಲವರು ಈ ಬಗ್ಗೆ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಗಮನಕ್ಕೆ ತಂದಿದ್ದರೂ, ನಿರ್ಲಕ್ಷ್ಯ ತೋರಿ ಬೆಂಕಿ ಹಾಕುವುದನ್ನು ಮುಂದುವರಿಸಿದ್ದರು.
ಈ ನಡುವೆ ಜಮೀನಿನ ಮಾಲಕರಿಗೂ ಈ ಬಗ್ಗೆ ದೂರು ತಲುಪಿದ್ದು, ಗುತ್ತಿಗೆ ಕಂಪೆನಿ ಸಿಬ್ಬಂದಿಗೆ ಬೆಂಕಿ ಹಾಕದಂತೆ ಅವರೂ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಹೀಗಿದ್ದರೂ ಪ್ಲ್ಯಾಸ್ಟಿಕ್, ರಬ್ಬರ್ ತ್ಯಾಜ್ಯ ಕ್ಕೆ ರಾತ್ರಿ ಹೊತ್ತು ಬೆಂಕಿ ನಂದಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದರು.
ಬುಧವಾರ ರಾತ್ರಿಯೂ ಮೈದಾನ ಎರಡು ಕಡೆಗಳಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ ಹಾಕಲಾಗಿದ್ದು, ಪರಿಸರದಲ್ಲಿ ಕಪ್ಪು ಹೊಗೆ ಆವರಿಸಿತ್ತು.
ಈ ಕುರಿತಾಗಿ ಸ್ಥಳೀಯರು ರಾತ್ರಿ 11.30 ರ ಸುಮಾರಿಗೆ ಪುತ್ತೂರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ.
ಇದೇ ಸಂದರ್ಭ ಸ್ಥಳೀಯರು ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ವಿಷಗಾಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರಲ್ಲದೆ, ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಮುಂದಾಗುವ ತೀರ್ಮಾನ ಕೈಗೊಳ್ಳುತ್ತಿದ್ದಂತೆಯೇ, ಸಿಬ್ಬಂದಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ಮುಂದೆ ಇಂತಹಾ ಘಟನೆಗಳು ಮರುಕಳಿಸದಂತೆ ಗಮನಹರಿಸುವುದಾಗಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಠಾಣಾಧಿಕಾರಿ ವಿ. ಸುಂದರ್, ಎಲ್.ಎಫ್. ಪ್ರವೀಣ್ ಕುಮಾರ್, ಎಫ್.ಡಿ ಮೋಹನ್, ಎಚ್.ಜಿ ವಿನಯ್ ಕುಮಾರ್ ಹಾಗೂ ಸಲ್ಲಾವುದ್ದೀನ್ ಭಾಗವಹಿಸಿದ್ದರು.
ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಎನ್ ಐ ಟಿ ಕೆ ಅಂಡರ್ ಪಾಸ್ ಬಳಿ ಬೈಕ್ ಗೆ ಬೋಲೇರೋ ಪಿಕಪ್ ಡಿಕ್ಕಿಯಾಗಿ ಬೈಕ್ ಸವಾರ ಸಹಿತ ನಾಲ್ವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಸುರತ್ಕಲ್ ಎನ್ಐಟಿಕೆ ಅಂಡರ್ ಪಾಸ್ ಬಳಿ ಬೊಲೆರೋ ಪಿಕಪ್ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಬೈಕ್ ಹಾಗೂ ಪಿಕಪ್ ಹೆದ್ದಾರಿ ಬದಿಯ ಅಪಘಾತ ತಡೆಗೆ ಹಾಕಿದ್ದ ತಡೆ ಬೇಲಿಗೆ ಡಿಕ್ಕಿ ಹೊಡೆದು ಸುಮಾರು 12 ಅಡಿ ಆಳದ ಅಂಡರ್ ಪಾಸ್ ಕೆಳಗಡೆ ಬಿದ್ದಿದೆ.
ಅಪಘಾತದಿಂದ ಬೈಕ್ ಸವಾರ ಸಹಿತ ಬೊಲೆರೋ ಪಿಕಪ್ ನಲ್ಲಿದ್ದ ವಾಹನದ ಚಾಲಕ ಹಾಗೂ ಪ್ರಯಾಣಿಕರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಕ್ರೇನ್ ಮೂಲಕ ಎರಡು ವಾಹನಗಳನ್ನು ತೆರವುಗೊಳಿಸಲಾಯಿತು. ಅಪಘಾತದ ಗಾಯಾಳುಗಳ ಮಾಹಿತಿ ಇನ್ನಷ್ಟೇ ಬರಬೇಕಾಗಿದೆ.
ಮಂಗಳೂರು : ಸುಮಾರು 50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಅತ್ಯಾಧುನಿಕ ಸೌಲಭ್ಯ ಹೊಂದಿರುವ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಸಿದ್ಧರಾಮಯ್ಯ ಶಿಲಾನ್ಯಾಸ ನೆರವೇರಿಸಿದ್ದಾರೆ. ಮೇರಿ ಹಿಲ್‌ನಲ್ಲಿ ನಿರ್ಮಾಣವಾಗಲಿರುವ ಈ ಪ್ರಾದೇಶಿಕ ಕೇಂದ್ರ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರಗಳಿಗೆ ಪೂರಕವಾಗಲಿರುವ ವ್ಯವಸ್ಥೆಗಳು ಈ ಕೇಂದ್ರದಲ್ಲಿ ಇರಲಿದೆ. ಇದು ವಿದ್ಯಾರ್ಥಿಗಳಿಂದ ಹಿಡಿದು ಸಂಶೋಧನೆ ನಡೆಸುವ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.
ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ ಏಷ್ಯಾದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿದ್ದು, ಮಂಗಳೂರಿನಲ್ಲಿ ನಿರ್ಮಾಣವಾಗುವ ಪ್ರಾದೇಶಿಕ ಕೇಂದ್ರ ದೇಶದಲ್ಲೇ ದೊಡ್ಡ ಕೇಂದ್ರವಾಗಲಿದೆ. ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಈ ಕೇಂದ್ರ ಸ್ಥಾಪನೆಗೆ 2024-25ರ ಬಜೆಟ್‌ನಲ್ಲಿ ಅನುದಾನ ನೀಡಲಾಗಿದ್ದು, ಈಗ ಚಾಲನೆ ನೀಡಲಾಗುತ್ತಿದೆ. ಈ ಕೇಂದ್ರ ಸ್ಥಾಪನೆ ಬಳಿಕ ಕರಾವಳಿ ಭಾಗದ ಜನರಿಗೆ ವೈದ್ಯಕೀಯ ಶಿಕ್ಷಣ ಸಂಬಂಧಿತ ವಿಚಾರವಾಗಿ ಬೆಂಗಳೂರಿಗೆ ಹೋಗುವುದು ತಪ್ಪಲಿದೆ ಎಂದು ಹೇಳಿದ್ದಾರೆ.
ಬಡವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಸಿಗುವಂತಹ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದಕ್ಕೆ ಬೇಕಾದ ಎಲ್ಲಾ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಪೀಕರ್ ಯು.ಟಿ.ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಸಚಿವ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ ಸೇರಿದಂತೆ ಶಾಸಕರು ಹಾಗೂ ಪರಿಷತ್ ಸದಸ್ಯರು ಭಾಗಿಯಾಗಿದ್ದರು.
ಉಳ್ಳಾಲ : ಕೋಟೆಕಾರ್ ಬ್ಯಾಂಕ್‌ನ ಕೆ.ಸಿ.ರೋಡ್ ಶಾಖೆಯಿಂದ ಭಾರೀ ದರೋಡೆ ನಡೆದಿದೆ. ಹಾಡಹಗಲೇ ಐದು ಮಂದಿ ಆಗಂತುಕರು ಬಂದೂಕು ತೋರಿಸಿ ಕೃತ್ಯ ಎಸಗಿದ್ದಾರೆ. ಫಿಯೇಟ್ ಕಾರಿನಲ್ಲಿ ಬಂದ ತಂಡ ಚಿನ್ನ, ನಗದುಗಳನ್ನು ದೋಚಿ ಪರಾರಿಯಾಗಿದೆ.
ಬ್ಯಾಂಕಿನಿಂದ 15 ಕೋಟಿ ರೂ.ಗೂ ಮಿಕ್ಕಿದ ಚಿನ್ನ ಹಾಗೂ ಐದು ಲಕ್ಷದಷ್ಟು ನಗದನ್ನು ಬ್ಯಾಂಕ್ ಸಿಬ್ಬಂದಿಗೆ ಬಂದೂಕು ಹಾಗೂ ತಲವಾರು ತೋರಿಸಿ ಬೆದರಿಸಿ ದರೋಡೆ ನಡೆಸಿ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದರೋಡೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಬ್ಯಾಂಕಿನಲ್ಲಿದ್ದ ಮೂವರು ಮಹಿಳಾ ಸಿಬ್ಬಂದಿ ಹಾಗೂ ಓರ್ವ ಪುರುಷ ಸಿಬ್ಬಂದಿ, ಮತ್ತೋರ್ವ ಸಿಸಿಟಿವಿ ಟೆಕ್ನೀಷಿಯನ್‌ಗೆ ಬಂದೂಕು ಹಾಗೂ ತಲವಾರು ತೋರಿಸಿದ ಮಾಸ್ಕ್ ಧರಿಸಿದ್ದ ತಂಡ ಸುಮ್ಮನಿರುವಂತೆ ಬೆದರಿಸಿ, ಇಲ್ಲವಾದಲ್ಲಿ ಕೊಲ್ಲುವ ಬೆದರಿಕೆಯನ್ನು ಒಡ್ಡಿ ಲಾಕರ್ ನಲ್ಲಿದ್ದ 15 ಕೋಟಿ ರೂ. ಚಿನ್ನ ಹಾಗೂ 5 ಲಕ್ಷ ರೂ ನಷ್ಟು ನಗದು ದೋಚಿ ಗ್ರೇ ಬಣ್ಣದ ಫಿಯೇಟ್ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸದಾ ಜನಜಂಗುಳಿಯಿಂದ ಕೂಡಿರುವ ಕೆ.ಸಿ ರೋಡ್ ಜಂಕ್ಷನ್ ಶುಕ್ರವಾರವಾದ ಹಿನ್ನೆಲೆಯಲ್ಲಿ ಹೆಚ್ಚು ಜನರಿರಲಿಲ್ಲ.
ಇನ್ನು ಸ್ಪೀಕರ್ ಯುಟಿ ಖಾದರ್ ಕೂಡ ತಮ್ಮ ಕ್ಷೇತ್ರದ ಬ್ಯಾಂಕ್‌ನಲ್ಲಿ ನಡೆದ ಘಟನೆ ಗಮನಕ್ಕೆ ಬರುತ್ತಿದ್ದಂತೆ, ಬ್ಯಾಂಕ್ ಗೆ ಭೇಟಿ ನೀಡಿ, ಪ್ರತ್ಯಕ್ಷದರ್ಶಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.