ಪುತ್ತೂರು: ಕಳೆದ ಹತ್ತು ದಿನಗಳಿಂದ ಸಂಪ್ಯ ಪರಿಸರದಲ್ಲಿ ಪ್ಲಾಸ್ಟಿಕ್, ರಬ್ಬರ್ ಬೆಂಕಿಯಿಂದ ಪಸರಿಸುತ್ತಿದ್ದ ವಿಷಗಾಳಿಗೆ ಪುತ್ತೂರು ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಮಧ್ಯರಾತ್ರಿ ಮುಕ್ತಿ ನೀಡಿದ್ದಾರೆ.
ಸಂಪ್ಯ ಕಮ್ಮಾಡಿ ಮೈದಾನದಲ್ಲಿ ಬೆಂಗಳೂರು ಮೂಲದ ಖಾಸಗಿ ಸಂಸ್ಥೆಯೊಂದು ಹಾಕಿದ್ದ ಕೆಎಸ್ಆರ್ಟಿಸಿ ಬಸ್ಸಿನ ತ್ಯಾಜ್ಯ ರಾಶಿಯ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸಿದ್ದಾರೆ.
ಘಟನೆ ವಿವರ: ಬೆಂಗಳೂರು ಮೂಲದ ರಾಯಲ್ ಆಟೋ ಮೊಬೈಲ್ಸ್ ಸಂಸ್ಥೆ ಕಳೆದ ಎರಡು ತಿಂಗಳಿನಿಂದ ಕೆಎಸ್ ಆರ್ ಟಿಸಿ ಸಂಸ್ಥೆಯಿಂದ ಏಲಂ ನಲ್ಲಿ ಪಡೆದುಕೊಂಡಿದ್ದ ನಿರುಪಯೋಗಿ(ಗುಜುರಿ) ಬಸ್ ಗಳನ್ನು ಪ್ರತ್ಯೇಕವಾಗಿ ವಿಂಗಡಿಸುವ ಕಾರ್ಯ ನಡೆಸುತ್ತಿತ್ತು.
ಇದರಂತೆ ಪ್ರತ್ಯೇಕಿಸಲ್ಪಟ್ಟ ಪ್ಲಾಸ್ಟಿಕ್, ರಬ್ಬರ್ , ಟಯರ್ ನ ತ್ಯಾಜ್ಯಗಳಿಗೆ ರಾತ್ರಿಹೊತ್ತು ಬೆಂಕಿ ಹಾಕುವ ಮೂಲಕ ಪರಿಸರದಲ್ಲಿ ವಿಷಗಾಳಿ ಹರಡುವ ಕಾರ್ಯ ನಡೆಸುತ್ತಿತ್ತು. ತಡರಾತ್ರಿ ಬೆಂಕಿ ಹಾಕುತ್ತಿದ್ದ ಹಿನ್ನೆಲೆಯಲ್ಲಿ ಈ ಕೃತ್ಯ ಬಹುತೇಕರ ಗಮನಕ್ಕೆ ಬಂದಿರಲಿಲ್ಲ.
ಈ ವಿಷಗಾಳಿಯಿಂದ ಪರಿಸರದ ಹಲವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೆಲವು ಮನೆಮಂದಿ ನೆಂಟರಮನೆಗೆ ವಲಸೆ ಹೊರಟಿದ್ದಾರೆ.
ಸ್ಥಳೀಯವಾಗಿ ಹಲವರು ಈ ಬಗ್ಗೆ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಗಮನಕ್ಕೆ ತಂದಿದ್ದರೂ, ನಿರ್ಲಕ್ಷ್ಯ ತೋರಿ ಬೆಂಕಿ ಹಾಕುವುದನ್ನು ಮುಂದುವರಿಸಿದ್ದರು.
ಈ ನಡುವೆ ಜಮೀನಿನ ಮಾಲಕರಿಗೂ ಈ ಬಗ್ಗೆ ದೂರು ತಲುಪಿದ್ದು, ಗುತ್ತಿಗೆ ಕಂಪೆನಿ ಸಿಬ್ಬಂದಿಗೆ ಬೆಂಕಿ ಹಾಕದಂತೆ ಅವರೂ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಹೀಗಿದ್ದರೂ ಪ್ಲ್ಯಾಸ್ಟಿಕ್, ರಬ್ಬರ್ ತ್ಯಾಜ್ಯ ಕ್ಕೆ ರಾತ್ರಿ ಹೊತ್ತು ಬೆಂಕಿ ನಂದಿಸುವ ಕಾರ್ಯ ನಿರಂತರವಾಗಿ ನಡೆಸುತ್ತಿದ್ದರು.
ಬುಧವಾರ ರಾತ್ರಿಯೂ ಮೈದಾನ ಎರಡು ಕಡೆಗಳಲ್ಲಿ ತ್ಯಾಜ್ಯ ರಾಶಿಗೆ ಬೆಂಕಿ ಹಾಕಲಾಗಿದ್ದು, ಪರಿಸರದಲ್ಲಿ ಕಪ್ಪು ಹೊಗೆ ಆವರಿಸಿತ್ತು.
ಈ ಕುರಿತಾಗಿ ಸ್ಥಳೀಯರು ರಾತ್ರಿ 11.30 ರ ಸುಮಾರಿಗೆ ಪುತ್ತೂರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಚಾರ ತಿಳಿಸಿದ್ದು, ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಿದ್ದಾರೆ.
ಇದೇ ಸಂದರ್ಭ ಸ್ಥಳೀಯರು ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ವಿಷಗಾಳಿಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿದರಲ್ಲದೆ, ಗುತ್ತಿಗೆ ಸಂಸ್ಥೆಯ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಒಂದು ಹಂತದಲ್ಲಿ ಪೊಲೀಸರಿಗೆ ದೂರು ನೀಡಿ ಕಾನೂನು ಕ್ರಮಕ್ಕೆ ಮುಂದಾಗುವ ತೀರ್ಮಾನ ಕೈಗೊಳ್ಳುತ್ತಿದ್ದಂತೆಯೇ, ಸಿಬ್ಬಂದಿ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದು ಮುಂದೆ ಇಂತಹಾ ಘಟನೆಗಳು ಮರುಕಳಿಸದಂತೆ ಗಮನಹರಿಸುವುದಾಗಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಮುಖ್ಯ ಠಾಣಾಧಿಕಾರಿ ವಿ. ಸುಂದರ್, ಎಲ್.ಎಫ್. ಪ್ರವೀಣ್ ಕುಮಾರ್, ಎಫ್.ಡಿ ಮೋಹನ್, ಎಚ್.ಜಿ ವಿನಯ್ ಕುಮಾರ್ ಹಾಗೂ ಸಲ್ಲಾವುದ್ದೀನ್ ಭಾಗವಹಿಸಿದ್ದರು.