ಕಾಂಗ್ರೆಸ್ ಹಿರಿನಾಯಕರಾದ ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಆರ್ ಎಸ್‌ಎಸ್ ನಾಯಕ ಡಾ. ಕಲ್ಲಡ್ಕ ಪ್ರಭಾಕರ್ ಭಟ್..!
ಬಂಟ್ವಾಳ : ಆರ್ ಎಸ್ ಎಸ್ ಹಿರಿಯ ನಾಯಕರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಅವರು ಕಾಂಗ್ರೆಸ್ ಹಿರಿಯ ನಾಯಕ -ರಾಜಕೀಯ ಮುತ್ಸದ್ದಿ ಬಿ ಜನಾರ್ದನ ಪೂಜಾರಿ ಅವರ ಭೇಟಿ ಮಾಡಿ ಮಾತುಕಡೆ ನಡೆಸಿದ್ದಾರೆ.
ಇದೊಂದು ಸೌಹಾರ್ದ ಭೇಟಿ ಎಂದು ಬಣ್ಣಿಸಲಾಗಿದೆ. ಬಿಸಿ ರೋಡಿಯ ಪೂಜಾರಿ ಅವರ ನಿವಾಸಕ್ಕೆ ಪತ್ನಿ ಕಮಲಾ ಅವರೊಂದಿಗೆ ಭೇಟಿ ನೀಡಿದ ಡಾ. ಭಟ್ ಅವರು ಪೂಜಾರಿ ಅವರ ಕಾಲು ಹಿಡಿದು ಆಶೀರ್ವಾದ ಪಡೆದುಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕೆ ನಿಧಿ ಸಂಗ್ರಹಿಸುವ ಕಾರ್ಯಕ್ರಮ ವೇಳೆ ಡಾ। ಪ್ರಭಾಕರ್ ಭಟ್ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಇದೇ ವೇಳೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಯೋಜನೆ ಬಗ್ಗೆ ಪ್ರಭಾಕರ್ ಭಟ್ ಅವರು ಜನಾರ್ದನ ಪೂಜಾರಿ ಅವರಿಗೆ ಮಾಹಿತಿ ನೀಡಿದ್ದಾರೆ.
ಜನಾರ್ದನ ಪೂಜಾರಿ ಅವರು ಕೂಡಾ ಪ್ರಭಾಕರ್ ಭಟ್ ಅವರ ಕೈಹಿಡಿದು ಮುಖ ನೇವರಿಸಿ ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ.
ಹಿರಿ ಜೀವ ಕುದ್ರೊಳಿ ಕ್ಷೇತ್ರದ ಆಧುನೀಕರಣದ ರೂವಾರಿ, ಬಿಲ್ಲವರ ವರಿಷ್ಠ ನಾಯಕರಾದ ಜನಾರ್ದನ ಪೂಜಾರಿ ಅವರು ಪ್ರಸ್ತುತ ಸಕ್ರೀಯ ರಾಜಕರಣದಿಂದ ದೂರ ಇದ್ದಾರೆ.
ಕಳೆದ ವರ್ಷ ಮಹಾಮಾರಿ ಕೊರೊನಾಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಗುಣಮುಖರಾಗಿ ಇದೀಗ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ.